ಬೆಂಗಳೂರು: ಸಿದ್ದರಾಮಯ್ಯನವರು ನಮ್ಮ ನಾಯಕ. ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಅವರು ಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮುಂದಿನ ಚುನಾವಣೆಗೂ ಸಿಎಂ ಸಿದ್ದರಾಮಯ್ಯ ಬೇಕೇ ಬೇಕು ಎನ್ನುವ ಸಚಿವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು. ಎಲ್ಲಾ ಚುನಾವಣೆಗಳಿಗೂ ಅವರು ಬೇಕು. ಕಾಂಗ್ರೆಸ್ ಪಕ್ಷ ಎರಡು ಬಾರಿ ಸಿಎಂ ಆಗುವ ಅವಕಾಶ ಕೊಟ್ಟಿದೆ. ಸಿಎಂ ಆಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ದಿನ ಬೆಳಗಾದರೆ ಅವರ ಸುದ್ದಿ ಎತ್ತಿಕೊಂಡು ಅವರ ಹೆಸರು ದುರುಪಯೋಗ ಮಾಡೋದು ಬೇಡ. ನಮ್ಮಲ್ಲಿ ಗೊಂದಲದ ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ ಎಂದರು.
ಕುಡಿಯುವ ನೀರಿಗಾಗಿ ಪಕ್ಷಾತೀತ ಹೋರಾಟ ಅನ್ನೋ ದೇವೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಸಹಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ ಸಹಿ ಮಾಡಿಸಲಿ. ಒಂದೇ ದಿನದಲ್ಲಿ ಅನುಮತಿ ಕೊಡುತ್ತೇನೆ ಅಂದಿದ್ದರೂ ಕೊಡಿಸಲಿಲ್ಲ. ಇದು ಅವರ ಹೋರಾಟ ಅಲ್ಲ. ಇದು ರಾಜ್ಯದ ಹೋರಾಟ. ಮಹಾದಾಯಿ ವಿಚಾರದ ಬಗ್ಗೆ ನಾನು ಮನವಿ ಮಾಡಿದ್ದೇನೆ. ಅವರು ಅಧಿಕಾರದಲ್ಲಿ ಇದ್ದಾರೆ. ನಾವು ಹೋರಾಟ ಮಾಡಬೇಕಾಗಿದೆ. ನಮಗೆ ರಾಜಕೀಯ ಮಾಡೋ ಅವಶ್ಯಕತೆ ಇಲ್ಲ. ನಾವು ರಾಜಕಾರಣ ಮಾಡಲ್ಲ, ಅವರಿಗೆ ರಾಜಕಾರಣ ಮಾಡಿ ರೂಢಿ ಇದೆ. ನಮಗೆ ಸಿಕ್ಕ ಅವಕಾಶದಲ್ಲಿ ಹೋರಾಟ ಮಾಡಿದ್ದೇವೆ. ನಾವು ಹೋರಾಟ ಮಾಡಿದಾಗ ಯಾವ ರೀತಿ ಟೀಕೆ ಮಾಡಿದ್ರು ಗೊತ್ತಿದೆ. ಆದರೂ ಚಿಂತೆಯಿಲ್ಲ ಅದನ್ನೆಲ್ಲಾ ಮರೆತು ರಾಜ್ಯದ ಹಿತಕ್ಕೆ ಕೆಲಸ ಮಾಡ್ತೀವಿ ಎಂದು ಹೇಳಿದರು.
ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆ ಯಾವುದೇ ವಿಚಾರ ಇರಲಿ, ಮಾತನಾಡುವವರು ಒಂದು ದಿನವಾದ್ರೂ ಸಂಸತ್ನಲ್ಲಿ ಹಣ ಕೇಳಿದ್ರಾ.?. ಬಜೆಟ್ನಲ್ಲಿ ಈ ಯೋಜನೆಗಳಿಗೆ 5,400 ಕೋಟಿ ಘೋಷಣೆ ಆಗಿದೆ. ಅದನ್ನು ಕೊಡಿ ಅಂತ ಕೇಳಿಲ್ಲಾ? ನಾನು ಕುಮಾರಸ್ವಾಮಿ, ದೇವೇಗೌಡರು ಸೇರಿ ಸಂಸದರ ಬಳಿ ಇದನ್ನೇ ನಿರೀಕ್ಷೆ ಮಾಡಿದ್ದೆ. ಆದರೆ ಒಬ್ಬರೂ ಕೂಡ ಇದನ್ನು ಕೇಳಲಿಲ್ಲ. ಅವರು ಒಕ್ಕೊರಲಿನಿಂದ ರಾಜ್ಯದ ಹಿತ ಕಾಯ್ತಾರೆ ಅಂದುಕೊಂಡಿದ್ದೆ. ಅದರಲ್ಲಿ ವಿಫಲ ಆಗಿದ್ದಾರೆ. ಅದನ್ನು ಮಾಡಲಿ ಮೊದಲು ಎಂದು ತಿರುಗೇಟು ನೀಡಿದರು.
ಕಾವೇರಿ-ಗೋದಾವರಿ ಜೋಡಣೆ ಮಾಡಲಿ ಅಂತ ದೇವೇಗೌಡರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮಾಡಲಿ ಬಹಳ ಸಂತೋಷ. ತರಲಿ ಮೊದಲು ಯೋಜನೆ. ನಾವು ಬೆಂಬಲ ಕೊಡ್ತೀವಿ. ಬೆಂಗಳೂರು ನೀರಿಗೆ ಏನು ಬೇಕೋ ಅದನ್ನು ಮಾಡ್ತಾ ಇದ್ದಾರೆ ಇಲ್ಲಿಂದಲೇ ನಾವು ಸಾಷ್ಟಾಂಗ ನಮಸ್ಕಾರ ಹಾಕ್ತೀವಿ. ಅವರ ಪಕ್ಷದ ಕಡೆಯಿಂದ ಗೊಂದಲ ಹೇಳಿಕೆ ಕೊಡಿಸ್ತಾ ಇದ್ದಾರೆ. ಡಿ.ಸಿ.ತಮ್ಮಣ್ಣ ಅವರಿಗೆ ಅಂಕಿ ಅಂಶ ಗೊತ್ತಿಲ್ಲ. ಎಷ್ಟು ಏನು ನೀರು ನಷ್ಟ ಆಗುತ್ತಿದೆ ಅಂತ ಗೊತ್ತಿಲ್ಲ. ಡಿಪಿಆರ್ ಮಾಡಿದ್ದಾರೆ ಅಷ್ಟೇ. ನಾವು ತೀರ್ಮಾನ ಮಾಡಿಲ್ಲ. ನಾವು ಬಂದ ತಕ್ಷಣ ಆರು ಟಿಎಂಸಿ ನೀರು ಹುಡುಕಿ, ಸ್ಟೋರೇಜ್ ಏನು ಕೊಡಬಹುದು ಅಂತ ನೋಡಿ ಸರ್ಕಾರದ ಆದೇಶ ಮಾಡಿಸಿದ್ದೆವು ಎಂದು ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ನಮಗೆ ಬೇಕೇ ಬೇಕು, ಮುಂದಿನ ನಾಯಕತ್ವ ಬೆಳೆಸೋವರೆಗೆ ಇರಬೇಕು: ಸಚಿವ ಸತೀಶ್ ಜಾರಕಿಹೊಳಿ
ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಪ್ರಸ್ತಾಪ ಅನಾವಶ್ಯಕ : ಸಚಿವ ಕೆ.ಎನ್. ರಾಜಣ್ಣ