ಬೆಂಗಳೂರು: ಇದೇ ಮಾರ್ಚ್ 1ರಿಂದ ಪ್ರಾರಂಭವಾಗಲಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ತಮ್ಮ ಚಲನಚಿತ್ರಗಳನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ ಸಂವಿಧಾನ ಸಿನಿ ಕಂಬೈನ್ಸ್ ಸೇರಿದಂತೆ 9 ಸಿನಿಮಾ ನಿರ್ಮಾಪಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ತುಮಕೂರಿನ ಸಂವಿಧಾನ ಸಿನಿ ಕಂಬೈನ್ಸ್ ಸೇರಿ ಒಂಬತ್ತು ಪ್ರತ್ಯೇಕ ಸಂಸ್ಥೆಗಳ ನಿರ್ಮಾಪಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗ್ಡೆ ಅವರ ಏಕಸದಸ್ಯ ಪೀಠ ನಡೆಸಿ, ರಾಜ್ಯ ಸರ್ಕಾರ ಹಾಗೂ ಕನ್ನಡ ಚಲನಚಿತ್ರ ಅಕಾಡೆಮಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಚಲನಚಿತ್ರಗಳನ್ನು (ಫೀಚರ್ ಫಿಲ್ಮ್) ಆಯ್ಕೆ ಮಾಡಲು ರಚಿಸಿದ್ದ ಸಮಿತಿಯು ಅರ್ಜಿದಾರರು ಸಲ್ಲಿಸಿರುವ ಚಿತ್ರಗಳನ್ನು ಕನಿಷ್ಠ ಪಕ್ಷ ವೀಕ್ಷಣೆ ಮಾಡಿಲ್ಲ. ಅಕಾಡೆಮಿಗೆ ಸಾಮಾನ್ಯ ಸಮಿತಿ ಸದಸ್ಯರನ್ನು ರಾಜ್ಯ ಸರ್ಕಾರವು ಫೆಬ್ರವರಿ 15ರಂದು ನೇಮಕ ಮಾಡಿದೆ. ಸದಸ್ಯರ ನೇಮಕಾತಿಗೂ ಮುನ್ನ ಸಾಕ್ಷ್ಯಚಿತ್ರಗಳನ್ನು ಆಯ್ಕೆ ಮಾಡಿರುವ ಅಧ್ಯಕ್ಷರ ನಡೆ ಪಕ್ಷಪಾತಿಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೆ, ಸಾಮಾನ್ಯ ಸಮಿತಿಯು ಚಲಚಿತ್ರಗಳನ್ನು ವೀಕ್ಷಿಸಲು ಹೊಸದಾಗಿ ಸಮಿತಿ ರಚಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಧ್ಯಂತರ ಪರಿಹಾರದ ಭಾಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ಪೀಠ, ಸಿನಿಮೋತ್ಸವಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಯಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಲಾಗದು. ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಚಲಚಿತ್ರ ಅಕಾಡೆಮಿಯು ಸಿನಿಮೋತ್ಸವದಲ್ಲಿ ಭಾಗಿಯಾಗಲು ಕನ್ನಡ, ಭಾರತ ಮತ್ತು ಏಷ್ಯಾ ಚಿತ್ರ ವಿಭಾಗದಲ್ಲಿ ಪ್ರವೇಶಿಕೆಗೆ ಆಹ್ವಾನಿಸಿತ್ತು. ಇದರಲ್ಲಿ ಅರ್ಜಿದಾರರು ಒಟ್ಟು ಒಂಬತ್ತು ಸಾವಿರ ರೂಪಾಯಿ ಪಾವತಿಸಿ, ಎಲ್ಲಾ ವಿಭಾಗಗಳಿಗೂ ಅರ್ಜಿ ಹಾಕಿದ್ದರು. ಒಟ್ಟಾರೆ 136 ಸಿನಿಮಾಗಳ ಪೈಕಿ ಕನ್ನಡ, ಭಾರತ ಮತ್ತು ಏಷ್ಯಾ ಮೂರು ವಿಭಾಗದಲ್ಲಿ ತಲಾ 14 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ತಮ್ಮ ಸಿನಿಮಾಗಳನ್ನು ವೀಕ್ಷಿಸಿಯೇ ಇಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಬೆಂಗಳೂರಿನ ಒರೆಯಾನ್ ಮಾಲ್‌ನಲ್ಲಿ ಸಿನಿಮೋತ್ಸವವು ಮಾರ್ಚ್ 1ರಿಂದ 8ರವರೆಗೆ ನಡೆಯಲಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಆರೋಪಿಗಳ ಗುರುತು ಪತ್ತೆಗೆ ಆಧಾರ್ ದತ್ತಾಂಶ ಪರಿಶೀಲಿಸಲು ಹೈಕೋರ್ಟ್ ಅನುಮತಿ