ಬೆಂಗಳೂರು: ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿ(ಡಿಸಿವಿಸಿ)ಗೆ ಕೇಂದ್ರ ಸರ್ಕಾರಿ ಜಾತಿ ಪ್ರಮಾಣಪತ್ರವನ್ನೂ ಸಹ ಪರಿಶೀಲಿಸುವ ಅಧಿಕಾರವಿದೆ ಎಂದು ಹೈಕೋರ್ಟ್ ಇಂದು ತಿಳಿಸಿದೆ.
ತಮ್ಮ ಜಾತಿ ಪ್ರಮಾಣಪತ್ರ ಪರಿಶೀಲನಾ ಕಾರ್ಯವನ್ನು ಡಿಸಿವಿಸಿಗೆ ವಹಿಸಿದ್ದ ಕ್ರಮ ಪ್ರಶ್ನಿಸಿ ಹೊಸಪೇಟೆಯ ನೈಋತ್ಯ ರೈಲ್ವೆ ವಲಯದ ನಿವೃತ್ತ ತಾಂತ್ರಿಕ ಸಿಬ್ಬಂದಿ ಸಂಗಪ್ಪ ಎಂ.ಬಾಗೇವಾಡಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿತು.
ಅಲ್ಲದೆ, ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ತಹಶೀಲ್ದಾರ್, ಸಂಭಾವ್ಯ ಕೇಂದ್ರ ಸರ್ಕಾರಿ ಉದ್ಯೋಗಿ ಅಥವಾ ಕೇಂದ್ರ ಸರ್ಕಾರದ ಸಿಬ್ಬಂದಿಗೆ ಜಾತಿ ಪ್ರಮಾಣಪತ್ರ ವಿತರಣೆ ಮಾಡಿದ್ದಾರೆ. ಡಿಸಿವಿಸಿ ಪರಿಶೀಲನೆ ಮಾಡುವ ಎಲ್ಲಾ ಅಧಿಕಾರವನ್ನು ಹೊಂದಿರುತ್ತದೆ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಕರ್ನಾಟಕ ಅಧಿಸೂಚಿತ ಜಾತಿ, ಅಧಿಸೂಚಿತ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು ಇತ್ಯಾದಿ)ಕಾಯಿದೆ 1992ರ ನಿಯಮಗಳ ಅನುಸಾರ ಜಾತಿ ಪ್ರಮಾಣ ಪತ್ರಗಳನ್ನು ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ತಹಶೀಲ್ದಾರ್‌ರಂತಹ ಅಧಿಕಾರಿಗಳು ವಿತರಿಸುತ್ತಾರೆ. ಸರ್ಕಾರದಲ್ಲಿ ಜಾತಿ ಪ್ರಮಾಣಪತ್ರಗಳ ವಿತರಣೆ ಮತ್ತು ಅವುಗಳ ಪರಿಶೀಲನೆಗೆ ತನ್ನದೇ ಆದ ವ್ಯವಸ್ಥೆ ಇದೆ. ನ್ಯಾಯಾಲಯಗಳ ಮುಂದೆ ಈ ವಿಚಾರ ಬಂದಾಗಲೂ ಕೋರ್ಟ್‌ಗಳು ವ್ಯವಸ್ಥೆ ಬಲವರ್ಧನೆಗೆ ಹಲವು ನಿರ್ದೇಶನಗಳನ್ನು ನೀಡಿದೆ. ವಿಶೇಷವಾಗಿ ಸುಪ್ರೀಂ ಕೋರ್ಟ್ ಮಾಧುರಿ ಪಾಟೀಲ್ ಪ್ರಕರಣದಲ್ಲಿಈ ಕುರಿತು ಹಲವು ನಿರ್ದೇಶನಗಳನ್ನು ನೀಡಿದೆ ಎಂದು ಪೀಠ ಹೇಳಿದೆ.
ಹೀಗಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಒಂದು ವೇಳೆ ತಹಶೀಲ್ದಾರ್ ಜಾತಿ ಪ್ರಮಾಣಪತ್ರ ವಿತರಿಸಿದ್ದರೆ, ಅದನ್ನು ಪರಿಶೀಲಿಸುವ ಅಧಿಕಾರ ಇರುವುದು ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿ(ಡಿಸಿವಿಸಿ)ಗೆ ಮಾತ್ರ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕೇಂದ್ರದ ಆದೇಶಗಳನ್ನು ಪರಿಶೀಲಿಸಿದರೆ ನಕಲಿ ಜಾತಿ ಪ್ರಮಾಣಪತ್ರಗಳನ್ನು ತಡೆಯುವ ಕುರಿತು ರಾಜ್ಯ ಸರ್ಕಾರಗಳು ಸಹಕಾರದ ವಿಷಯ ಪ್ರಸ್ತಾಪವಾಗಿದೆಯೇ ಹೊರತು, ಅದರಲ್ಲಿ ಡಿಸಿವಿಸಿಗೆ ಪರಿಶೀಲನಾ ಅಧಿಕಾರವಿಲ್ಲವೆಂದು ಹೇಳಿಲ್ಲ. ಜತೆಗೆ 1992 ಕಾಯಿದೆಯ ಅನುಸಾರವೇ ಡಿಸಿವಿಸಿಗಳನ್ನು ರಚನೆ ಮಾಡಲಾಗಿದೆ ಮತ್ತು ಅವುಗಳಿಗೆ ಜಾತಿ ಪ್ರಮಾಣಪತ್ರಗಳ ಪರಿಶೀಲನೆ ಮಾಡುವ ಅಧಿಕಾರವನ್ನು ಸಂವಿಧಾನದತ್ತವಾಗಿ ನೀಡಲಾಗಿದೆ. ಹಾಗಾಗಿ ಪ್ರಕರಣದಲ್ಲಿಮಧ್ಯೆಪ್ರವೇಶ ಮಾಡುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರು, ತಾನು ಕೇಂದ್ರ ಸರ್ಕಾರದ ಬರುವ ನೈಋತ್ಯ ರೈಲ್ವೆ ವಲಯದ ಉದ್ಯೋಗಿ, ತನ್ನ ವಿರುದ್ಧ ಕರ್ನಾಟಕ ಅಧಿಸೂಚಿತ ಜಾತಿ, ಅಧಿಸೂಚಿತ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿಮೀಸಲು ಇತ್ಯಾದಿ) ಕಾಯಿದೆ 1992ರಡಿ ಜಾತಿ ಪ್ರಮಾಣಪತ್ರ ಪರಿಶೀಲನಾ ವಿಚಾರಣೆ ಆರಂಭಿಸುವಂತಿಲ್ಲ. ಆ ಕುರಿತು ಹಲವು ಆದೇಶಗಳಿವೆ. ಕೇಂದ್ರ ಸರ್ಕಾರದ ಆದೇಶದಂತೆ ಕೇಂದ್ರ ಸರ್ಕಾರಿ ಉದ್ಯೋಗಿಗಳ ಜಾತಿ ಪ್ರಮಾಣಪತ್ರ ಪರಿಶೀಲನೆ ಅಧಿಕಾರ ಜಿಲ್ಲಾ ಮ್ಯಾಜಿಸ್ಪ್ರೇಟ್‌ಗೆ ಮಾತ್ರ ಇದೆಯೇ ಹೊರತು ಡಿಸಿವಿಸಿಗೆ ಇಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.