ಮಂಗಳೂರು(ದಕ್ಷಿಣ ಕನ್ನಡ): 2015ರಲ್ಲಿ ಭಾರೀ ಸುದ್ದಿಯಾಗಿದ್ದ ಜಮೀನು ವ್ಯಾಜ್ಯ ಸಂಬಂಧ ಸುಂದರ ಮಲೆಕುಡಿಯ ಎಂಬವರ ಬೆರಳು ತುಂಡರಿಸಿದ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿತು.
ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಗೋಪಾಲ ಗೌಡ ಅಲಿಯಾಸ್ ಗೋಪಾಲ ಕೃಷ್ಣ ಗೌಡ (67), ಬಂದಾರು ಗ್ರಾಮದ ಎ.ದಮಯಂತಿ (71), ವಸಂತ ಗೌಡ ಅಲಿಯಾಸ್ ರಾಮಣ್ಣ ಗೌಡ(34) ಹಾಗು ನೆರಿಯಾ ಗ್ರಾಮದ ಪುಷ್ಪಲತಾ (41) ಶಿಕ್ಷೆಗೊಳಗಾದವರು.
ಗೋಪಾಲ ಗೌಡಗೆ 3 ವರ್ಷಗಳ ಕಾಲ ಕಠಿಣ ಸಜೆ ಮತ್ತು 1 ಲಕ್ಷ ರೂ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲನಾದಲ್ಲಿ 6 ತಿಂಗಳ ಸಾದಾ ಸಜೆ ವಿಧಿಸಲಾಗಿದೆ. ದಮಯಂತಿ, ವಸಂತ ಗೌಡ, ನೆರಿಯ ಗ್ರಾಮದ ಪುಷ್ಪಲತಾಗೆ 2 ವರ್ಷಗಳ ಕಾಲ ಕಠಿಣ ಸಜೆ ಮತ್ತು ತಲಾ 15,000 ರೂ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದಲ್ಲಿ 3 ತಿಂಗಳ ಸಾದ ಸಜೆ ವಿಧಿಸಲಾಗಿದೆ. ಜೊತೆಗೆ, ದಂಡದ ಮೊತ್ತ 1,45,000 ರೂ.ಗಳನ್ನು ಸುಂದರ ಮಲೆಕುಡಿಯರಿಗೆ ನೀಡಬೇಕೆಂದು ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಹೆಚ್.ಎಸ್ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?: 2015 ಜುಲೈ 26ರಂದು ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ರೇವತಿ ಮತ್ತು ಬಿ.ಎ.ಸುಂದರ ಮಲೆಕುಡಿಯ ಅವರು ತಮ್ಮ ಮಕ್ಕಳಾದ ಪೂರ್ಣೇಶ್ ಮತ್ತು ಪೂರ್ಣಿಮಾ ಅರವರೊಂದಿಗೆ ಸರ್ಕಾರಿ ಅರಣ್ಯ ಇಲಾಖೆ ಸುರಕ್ಷಿತ ಕಾಡು ಸರ್ವೇ ನಂ.145/1ಪಿ ರಲ್ಲಿ ಸ್ವಾಧೀನ ಹೊಂದಿದ ಜಮೀನಿನಲ್ಲಿ ಕಾಡು ಕಡಿಯುತ್ತಿದ್ದರು. ಈ ವೇಳೆ ಆರೋಪಿಗಳು ಸ್ಥಳಕ್ಕೆ ಆಗಮಿಸಿದ್ದರು. ಜಮೀನಿಗೆ ಅಕ್ರಮ ಪ್ರವೇಶ ಮಾಡಿ, "ಇದು ನಮಗೆ ಸಂಬಂಧಪಟ್ಟ ಜಾಗ. ನಮ್ಮ ಜಾಗದಲ್ಲಿ ಯಾಕೆ ಕಾಡು ಕಡಿಯುತ್ತೀರಿ? ಎಂದು ಕೇಳಿದ್ದಾರೆ. ಇದಕ್ಕೆ ಸುಂದರ ಮಲೆಕುಡಿಯ, "ಇದು ಅರಣ್ಯ ಇಲಾಖೆಯವರು ನಮಗೆ ಬಿಟ್ಟುಕೊಟ್ಟ ಸ್ಥಳ. ನಮ್ಮ ಸ್ಥಳದಲ್ಲಿ ಕೆಲಸ ಮಾಡಬಾರದೆಂದು ಹೇಳಲು ನೀವು ಯಾರು? ಎಂದು ಆಕ್ಷೇಪಿಸಿದ್ದಾರೆ. ಈ ವೇಳೆ 1ನೇ ಆರೋಪಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಬಳಿಕ ತಾವು ತಂದಿದ್ದ ಕಳೆ ಕತ್ತರಿಸುವ ಯಂತ್ರದಿಂದ ಸುಂದರ ಮಲೆಕುಡಿಯ ಅವರ ಎಡ ಮತ್ತು ಬಲಕ್ಕೆ ಬೆರಳುಗಳು, ಅಂಗೈ, ಕೋಲು ಕೈಗಳಿಗೆ ಹಲ್ಲೆ ಮಾಡಿ, ಬೆರಳುಗಳನ್ನು ತುಂಡರಿಸಿ ತೀವ್ರ ಸ್ವರೂಪದ ಗಾಯ ಮಾಡಿ ಕೊಲೆಗೆ ಪ್ರಯತ್ನಿಸಿದ್ದರು.
ಇದೇ ವೇಳೆ ಆರೋಪಿಗಳು ಮೆಣಸಿನ ಪುಡಿಯನ್ನು ಪೂರ್ಣೇಶ್ ಮೇಲೆ ಎರಚಿದ್ದು, ಸ್ಥಳಕ್ಕೆ ಬಂದರೆ ನಿಮ್ಮನ್ನೂ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು. ಪ್ರಕರಣದ ಪ್ರಮುಖ ತನಿಖಾಧಿಕಾರಿಯಾಗಿ ಬಂಟ್ವಾಳ ಉಪವಿಭಾಗದ ಐಪಿಎಸ್ ರಾಹುಲ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದರು.
ವೆನ್ಲಾಕ್ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಮ್ರತ್ ಭಾನು ಮತ್ತು ಎಜೆ ಆಸ್ಪತ್ರೆಯ ವೈದ್ಯ ಡಾ. ದಿನೇಶ್ ಕದಮ್ ಗಾಯಾಳು ಸುಂದರ ಮಲೆಕುಡಿಯ ಅವರಿಗಾದ ತೀವ್ರ ಸ್ವರೂಪದ ಗಾಯಗಳಿಗೆ ಚಿಕಿತ್ಸೆ ನೀಡಿದ ಕುರಿತು ಸಾಕ್ಷಿ ನುಡಿದಿದ್ದರು. ಘಟನಾ ಸ್ಥಳದಲ್ಲಿ ದೊರೆತ ತುಂಡಾದ ಬೆರಳು ಸುಂದರ ಮಲೆಕುಡಿಯ ಅವರದ್ದೇ ಎಂದು ಡಾ.ಶಹನಾಜ್ ಫಾತಿಮಾ, ಪೊರೆನ್ಸಿಕ್ ಲ್ಯಾಬ್, ಡಿ.ಎನ್.ಎ ವಿಭಾಗ ತಜ್ಞರು ಸಾಕ್ಷ್ಯ ನುಡಿದಿದ್ದರು.
ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾಗಿ ಜುಡಿಷ್ ಓಲ್ಲಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.
ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 1 ವರ್ಷ ಶಿಕ್ಷೆ
ಇದನ್ನೂ ಓದಿ: ಲಂಚ ಬೇಡಿಕೆ ಆರೋಪದಲ್ಲಿ ಬಂಧನ ಪ್ರಕರಣ : ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿಗೆ ಜಾಮೀನು