ಕಾರವಾರ (ಉತ್ತರ ಕನ್ನಡ) : ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಬಳಿಯ ವಾಟೆಹೊಳೆ ಫಾಲ್ಸ್‌ನಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದ್ದು, ಶವಗಳನ್ನು ನೀರಿನಿಂದ ಮೇಲೆತ್ತಲಾಗಿದೆ.
ಶಿರಸಿ ತಾಲೂಕಿನ ಅಕ್ಷಯ್ ಪರಮೇಶ್ವರ ಭಟ್ (22) ಹಾಗೂ ಮರಾಠಿಕೊಪ್ಪದ ಜೋಡಕಟ್ಟೆ ನಿವಾಸಿಯಾಗಿದ್ದ ಸುಹಾಸ ಶೆಟ್ಟಿ (22) ಮೃತರು. ಶುಕ್ರವಾರ ಆರು ಜನ ಸ್ನೇಹಿತರು ಸೇರಿಕೊಂಡು ಫಾಲ್ಸ್ ನೋಡಲು ಹೋಗಿದ್ದರು. ಈ ವೇಳೆ ಫಾಲ್ಸ್‌ನಲ್ಲಿ ಈಜಲು ಹೋದಾಗ ಅಕ್ಷಯ್ ಭಟ್ ಹಾಗೂ ಸುಹಾಸ ಶೆಟ್ಟಿ ನೀರುಪಾಲಾಗಿದ್ದರು.
ಸ್ಥಳಕ್ಕೆ ಡಿ.ಎಸ್.ಪಿ. ಕೆ.ಎಲ್.ಗಣೇಶ, ಸಿದ್ದಾಪುರ ಠಾಣೆ ಇನ್ಸ್ಪೆಕ್ಟರ್ ಜೆ.ಬಿ.ಸೀತಾರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮುಳುಗು ತಜ್ಞರು ಹಾಗೂ ಮಾರಿಕಾಂಬಾ ಲೈಫ್ ಗಾರ್ಡ್ನ ಗೋಪಾಲ ಗೌಡ ತಂಡದವರು ಕಾರ್ಯಾಚರಣೆ ನಡೆಸಿ, ಇಬ್ಬರೂ ಯುವಕರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಘಟನೆ ಸಂಬಂಧ ಸಿದ್ದಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಗ್ರಾಹಕರಿಗೆ ಸ್ವೀಟ್ ಕಟ್ಟಿ ಕೊಡುವಾಗಲೇ ಹೃದಯಾಘಾತ: ಬೇಕರಿ ನೌಕರ ಸಾವು