ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ಮಂಜಿನ ವಾತಾವರಣ ಮುಂದುವರೆದ ಪರಿಣಾಮ ಇಂದು 100ಕ್ಕೂ ಅಧಿಕ ವಿಮಾನಗಳು ವಿಳಂಬವಾಗಿವೆ. ಆದರೆ, ಇಲ್ಲಿಯವರೆಗೆ ಯಾವುದೇ ವಿಮಾನ ಮಾರ್ಗ ಬದಲಾವಣೆ ಅಥವಾ ರದ್ದು ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಅರೆ.
ಕಡಿಮೆ ವೀಕ್ಷಣಾ ಸಾಮರ್ಥ್ಯ ಮತ್ತು ದಟ್ಟ ಮಂಜುಯಿಂದಾಗಿ ಕೆಲವು ವಿಮಾನಗಳು ವಿಳಂಬವಾಗಿದೆ. ಹವಾಮಾನದ ಕುರಿತು ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದ್ದು, ಮಂಜಿನ ವಾತಾವರಣ ಕಡಿಮೆಯಾಗುತ್ತಿದ್ದಂತೆ ಸುರಕ್ಷಿತ ಮತ್ತು ಸರಾಗ ಹಾರಾಟಕ್ಕೆ ಅನುವು ಮಾಡಲಾಗುವುದು ಎಂದು ಇಂಡಿಗೋ ಇಂದು ಬೆಳಗ್ಗೆ 8.18 ನಿಮಿಷಕ್ಕೆ ತನ್ನ ಪ್ರಯಾಣಿಕರಿಗೆ ಎಕ್ಸ್ ಜಾಲತಾಣದ ಮೂಲಕ ತಿಳಿಸಿದೆ.
ದೆಹಲಿ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸುವ ಡಿಐಎಎಲ್, ಕ್ಯಾಟ್ 3 ದೂರಿನಲ್ಲಿರುವ ವಿಮಾನಗಳು ಲ್ಯಾಂಡಿಂಗ್ ಮತ್ತು ಹಾರಾಟದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಕ್ಯಾಟ್ 3 ಸೌಲಭ್ಯದಲ್ಲಿ ವಿಮಾನಗಳು ಕಡಿಮೆ ವೀಕ್ಷಣಾ ಸಾಮರ್ಥ್ಯದಲ್ಲೂ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದೆ.
ಬುಧವಾರ ದಟ್ಟ ಮಂಜಿನ ಹಿನ್ನಲೆ 100ಕ್ಕೂ ಅಧಿಕ ವಿಮಾನಗಳ ಹಾರಾಟ ವಿಳಂಬಗೊಂಡಿದೆ. ಈ ಕುರಿತು ಇಂದು ಬೆಳಗ್ಗೆ 7.35ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿವಿಟೆಡ್ (ಡಿಐಎಎಲ್) ಪ್ರಯಾಣಿಕರ ವಿಮಾನದಲ್ಲಿ ವಿಳಂಬವಾಗಿದ್ದು, ಪ್ರಯಾಣಿಕರು ಈ ಸಂಬಂಧ ತಮ್ಮ ವಿಮಾನ ಸಂಸ್ಥೆಗಳ ಸಂಪರ್ಕಕ್ಕೆ ಒಳಗಾಗುವಂತೆ ತಿಳಿಸಿದೆ.
ನಗರವನ್ನು ಆವರಿಸಿದ ದಟ್ಟ ಮಂಜು: ರಾಷ್ಟ್ರ ರಾಜಧಾನಿಯಲ್ಲಿ ಶೀತಗಾಳಿ ಅಲೆ ಜೋರಾಗಿದೆ. ನಗರದೆಲ್ಲೆಡೆ ದಟ್ಟ ಮಂಜು ಮುಸುಕಿದ ವಾತಾವರಣ ಇದ್ದು, ಇದು ವಿಮಾನ ಸೇವೆ ಮಾತ್ರವಲ್ಲದೇ ರೈಲು ಮತ್ತು ಸಾರಿಗೆ ಕಾರ್ಯಾಚರಣೆ ಮೇಲೂ ಪರಿಣಾಮ ಬೀರಿದೆ.
ದೆಹಲಿಯಲ್ಲಿ ಇಂದು ಬೆಳಗ್ಗೆ 5.30ಕ್ಕೆ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇಂದು ಗರಿಷ್ಠ ತಾಪಮಾನ 9 ಡಿಗ್ರಿಗೆ ಇಳಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದೆಹಲಿಯಲ್ಲಿಂದು ಗರಿಷ್ಠ ತಾಪಮಾನ 19 ಡಿಗ್ರಿ ಇರಲಿದ್ದು, ಇಂದು ರಾತ್ರಿ ಅಥವಾ ಸಂಜೆ ಸಣ್ಣ ಮಳೆ ಹನಿಯನ್ನು ನಿರೀಕ್ಷಿಸಬಹುದು. ಸಂಜೆ ಮತ್ತು ರಾತ್ರಿ ಹೆಚ್ಚಿನ ಮಂಜು ಮುಸುಕಿದ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
26 ರೈಲು ಸೇವೆಯಲ್ಲಿ ವ್ಯತ್ಯಯ: ಮಂಜಿನ ವಾತಾವರಣದಿಂದ ರೈಲು ಸಂಚಾರದಲ್ಲಿ ಕೂಡ ವ್ಯತ್ಯವಾಗಿದ್ದು, 26 ರೈಲುಗಳು ತಡವಾಗಿ ಹೊರಟಿದೆ. ಉತ್ತರ ಭಾರತದಲ್ಲಿ ಇನ್ನು ಕೆಲವು ದಿನ ದಟ್ಟ ಮಂಜಿನ ವಾತಾವರಣ ಇರುವ ಹಿನ್ನೆಲೆ ಪ್ರಯಾಣಿಕರು ಸೂಕ್ತ ಮುನ್ನೆಚ್ಚರಿಕೆ ನಡೆಸುವಂತೆ ಸೂಚಿಸಲಾಗಿದೆ. (ಐಎಎನ್ಸ್/ ಪಿಟಿಐ)
ಇದನ್ನೂ ಓದಿ: ಮಹಾಕುಂಭ ಮೇಳ: ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು