ಮಹಾಕುಂಭ ನಗರ (ಉತ್ತರ ಪ್ರದೇಶ): ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಾಗರೋಪಾದಿಯಲ್ಲಿ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಭಾರಿ ಜನದಟ್ಟಣೆ ಹಿನ್ನೆಲೆಯಲ್ಲಿ ಮಹಾಕುಂಭಮೇಳವನ್ನು ಪೂರ್ವ ನಿರ್ಧರಿತ ದಿನಾಂಕದಂದು ಮುಗಿಸದೇ, ವಿಸ್ತರಣೆ ಮಾಡಲಾಗುತ್ತಿದೆ ಎಂಬ ವದಂತಿಗಳು ಹರಡಿವೆ.
ಜನವರಿ 13ರಂದು ಆರಂಭಗೊಂಡಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇದುವರೆಗೂ ನಿರೀಕ್ಷೆಗೂ ಮೀರಿ 50 ಕೋಟಿಗೂ ಅಧಿಕ ಜನರು ಭಾಗವಹಿಸಿ, ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೇ, ಮಹಾಕುಂಭವು ಪೂರ್ವ ನಿರ್ಧಾರಿತವಾದಂತೆ ಫೆಬ್ರವರಿ 26ರಂದು ಸಮಾಪ್ತಿಯಾಗಲಿದೆ.
ಮಹಾಕುಂಭಮೇಳವು ವಿಸ್ತರಣೆ ಆಗಲಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ರವೀಂದ್ರ ಮಂದರ್ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ''ಕಾರ್ಯಕ್ರಮದ ವೇಳಾಪಟ್ಟಿಯನ್ನು ಧಾರ್ಮಿಕ ಮುಹೂರ್ತಗಳನ್ನು (ಶುಭ ಸಮಯಗಳು) ಆಧರಿಸಿ ನಿರ್ಧರಿಸಲಾಗುತ್ತದೆ ಹಾಗೂ ಅದರಲ್ಲಿ ಯಾವುದೇ ಬದಲಾಣೆ ಇಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
"ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆಗಳ ಪ್ರಕಾರ, ಆಡಳಿತವು ಎಲ್ಲ ಭಕ್ತರಿಗೆ ಸುಗಮ ಪ್ರಯಾಣ ಮತ್ತು ಇತರ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಮೇಳದ ದಿನಾಂಕ ವಿಸ್ತರಿಸಲು ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪ್ರಸ್ತಾಪವಿಲ್ಲ. ಯಾತ್ರಿಕರು ಅಂತಹ ತಪ್ಪು ಮಾಹಿತಿ ನಂಬಬಾರದು" ಎಂದು ಡಿಎಂ ಹೇಳಿದ್ದಾರೆ.
''ತ್ರಿವೇಣಿ ಸಂಗಮದಲ್ಲಿ ಯಾವುದೇ ತೊಡಕುಗಳಿಲ್ಲದೇ ಪವಿತ್ರ ಸ್ನಾನ ಮಾಡಲು ಅನುಕೂಲವಾಗುವಂತೆ ಮಹಾಕುಂಭದ ಉಳಿದ ದಿನಗಳಲ್ಲಿಯೂ ಎಲ್ಲ ಅಗತ್ಯ ವ್ಯವಸ್ಥೆಗಳು ಮುಂದುವರೆಯಲಿದೆ. ಪ್ರಯಾಗ್‌ರಾಜ್‌ನಲ್ಲಿ ಭಕ್ತರ ಚಲನವಲನ ಮತ್ತು ಸಾಮಾನ್ಯ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಆಡಳಿತವು ಸಂಚಾರ ನಿರ್ವಹಣೆಯತ್ತ ಗಮನಹರಿಸಿದೆ'' ಎಂದು ತಿಳಿಸಿದರು.
ರೈಲು ನಿಲ್ದಾಣ ಬಂದ್ ಮಾಡಿಲ್ಲ: ರೈಲು ನಿಲ್ದಾಣ ಬಂದ್ ಮಾಡುವ ಕುರಿತು ಪ್ರತಿಕ್ರಿಯಿಸಿ, ''ಯಾವುದೇ ನಿಲ್ದಾಣವನ್ನು ಪೂರ್ವ ಸೂಚನೆ ಇಲ್ಲದೇ ಮುಚ್ಚಲಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. "ದಟ್ಟಣೆ ಆದ ದಿನಗಳಲ್ಲಿ ದರಗಂಜ್‌ನಲ್ಲಿರುವ ಪ್ರಯಾಗ್ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚುವುದು ಹಿಂದಿನಿಂದಲೂ ನಿಯಮಿತವಾಗಿ ನಡೆದುಕೊಂಡುಬಂದಿದೆ. ಯಾಕೆಂದರೆ ಅದು ಮೇಳ ಸ್ಥಳದ ಸಮೀಪವೇ ಇದೆ. ಜನದಟ್ಟಣೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಆದಾಗ್ಯೂ, ಎಲ್ಲ ಇತರ ರೈಲು ನಿಲ್ದಾಣಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರು ಸುಗಮವಾಗಿ ಪ್ರಯಾಣಿಸುತ್ತಿದ್ದಾರೆ" ಎಂದು ಡಿಸಿ ಸ್ಪಷ್ಟಪಡಿಸಿದರು.
''ಅಲ್ಲದೇ, ಮೇಳದ ಕಾರಣಕ್ಕೆ ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಗಳನ್ನು ತಪ್ಪಿಸಿಕೊಂಡಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರೀಕ್ಷಾ ಕೇಂದ್ರಗಳನ್ನು ಮುಂಚಿತವಾಗಿ ತಲುಪಲು ನಾವು ಮೊದಲೇ ಸೂಚಿಸಿದ್ದೇವೆ. ಎಲ್ಲರೂ ಆ ಸೂಚನೆಗಳನ್ನು ಪಾಲಿಸಿದ್ದಾರೆ. ಇದಲ್ಲದೇ, ಅನಿವಾರ್ಯ ಸಂದರ್ಭಗಳಲ್ಲಿ ಪರೀಕ್ಷೆಗಳನ್ನು ತಪ್ಪಿಸಿಕೊಳ್ಳಬಹುದಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಗಳು ನಿರ್ಧರಿಸಿವೆ" ಎಂದು ರವೀಂದ್ರ ಮಂದರ್ ಹೇಳಿದರು.
ಭಕ್ತರು ಮತ್ತು ನಿವಾಸಿಗಳು ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಪ್ರಯಾಗರಾಜ್ ಜಿಲ್ಲಾಡಳಿತವು ವಿನಂತಿಸಿದೆ.
ಇದನ್ನೂ ಓದಿ: ಮಹಾಕುಂಭಕ್ಕೆ ಸರ್ಕಾರಿ ನೌಕರರು, ಶಿಕ್ಷಕರಿಗೆ 2 ದಿನ ರಜೆ ಕೊಡಿ: ಸರ್ಕಾರವನ್ನ ಕೋರಿದ ಶಾಸಕಿ