ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆ ನಡೆಸುವುದಕ್ಕಾಗಿ ರಾಜ್ಯ ಸರ್ಕಾರವು ರಚನೆ ಮಾಡಿದ್ದ ಏಕ ಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಕೇಂದ್ರ ಸರ್ಕಾರವು ಮೂರು ವರ್ಷಗಳ ಕಾಲ ಸರ್ಕಾರದ ಎಲ್ಲಾ ನೇಮಕಾತಿಗಳಿಂದ ಅಮಾನತು ಮಾಡಿ ಹೊರಡಿಸಿದ್ದ ಆದೇಶವನ್ನು ಇಂದು ಹೈಕೋರ್ಟ್ ರದ್ದುಪಡಿಸಿದೆ.
ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು 2024ರ ನವೆಂಬರ್ 7ರಂದು ಹೊರಡಿಸಿದ್ದ ಡಿಬಾರ್ ಆದೇಶವನ್ನು ಬರ್ಖಾಸ್ತು ಮಾಡಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನ್ಯಾಯಮೂರ್ತಿ ದೇಸಾಯಿ ಅವರನ್ನು ಡಿಬಾರ್ ಮಾಡುವ ಕಠಿಣ ಕ್ರಮ ಕೈಗೊಂಡಿದೆ. ಇದಕ್ಕೂ ಮುನ್ನ ಇಲಾಖೆಯು ನ್ಯಾ.ದೇಸಾಯಿ ಅವರ ಅಭಿಪ್ರಾಯವನ್ನು ಕೇಳಿಲ್ಲ. ಅಲ್ಲದೇ, ಅವರ ನೇಮಕಾತಿಯನ್ನು ರದ್ದು ಮಾಡಿದ ಬಳಿಕ ಆಕ್ಷೇಪ ಸಲ್ಲಿಸಲು 15 ದಿನ ಕಾಲಾವಕಾಶದ ನೋಟಿಸ್ ನೀಡಬೇಕಿತ್ತು. ಅದನ್ನೂ ಮಾಡಲಾಗಿಲ್ಲ. ಈ ಪ್ರಕ್ರಿಯೆ ಪಾಲಿಸದೆ ಕೇಂದ್ರ ಸರ್ಕಾರವು ಡಿಬಾರ್ ಆದೇಶ ಮಾಡಬಾರದಿತ್ತು ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ತಾಂತ್ರಿಕವಾಗಿ ಆಕ್ಷೇಪಾರ್ಹವಾದ ಆದೇಶ ಮಾಡಿದ್ದು, ನಿಯಮಗಳನ್ನು ಪಾಲಿಸಿದ್ದರೆ ಆಕ್ಷೇಪಾರ್ಹವಾದ ಆದೇಶ ಹೊರ ಬರುತ್ತಿರಲಿಲ್ಲ. ಆದ್ದರಿಂದ ಡಿಬಾರ್ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ಪೀಠ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರ ನ್ಯಾ.ದೇಸಾಯಿ ಪರ ವಕೀಲರು, ಕೇಂದ್ರ ಸರ್ಕಾರ ಅರ್ಜಿದಾರರ ಅಭಿಪ್ರಾಯವನ್ನು ಕೇಳಿಲ್ಲ. ಕೇಂದ್ರ ಸರ್ಕಾರವು ನ್ಯಾಯದಾನ ತತ್ವವನ್ನು ಉಲ್ಲಂಘಿಸಿ ಡಿಬಾರ್ ಆದೇಶ ಮಾಡಿದೆ ಎಂದು ವಾದ ಮಂಡಿಸಿದ್ದರು.
ಅಲ್ಲದೆ, ನೇಮಕಾತಿ ಆದೇಶ ಮಾಡುವುದಕ್ಕೂ ಮುನ್ನ ನ್ಯಾ. ದೇಸಾಯಿ ಅವರ ಒಪ್ಪಿಗೆ ಕೇಳಬೇಕಿತ್ತು. ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದ ಬಳಿಕ ಅವರ ಜೊತೆ ವೈಯಕ್ತಿಕ ಸಮಾಲೋಚನೆ ನಡೆಸಬೇಕು ಎಂದು ನಿಯಮಗಳು ಹೇಳುತ್ತವೆ. ಒಂದೊಮ್ಮೆ ಅವರು ಸೇವೆಗೆ ಹಾಜರಾಗದಿದ್ದರೆ ಅವರನ್ನು ಡಿಬಾರ್ ಮಾಡುವುದಕ್ಕೂ ಮುನ್ನ 15 ದಿನ ಕಾಲಾವಕಾಶದ ನೋಟಿಸ್ ನೀಡಬೇಕು. ಆದರೆ, ನ್ಯಾ. ದೇಸಾಯಿ ಅವರನ್ನು ಡಿಬಾರ್ ಮಾಡುವುದಕ್ಕೂ ಮುನ್ನ ಇದ್ಯಾವುದನ್ನೂ ಪಾಲಿಸಲಾಗಿಲ್ಲ ಎಂದು ಪೀಠದ ಗಮನಕ್ಕೆ ತಂದಿದ್ದರು.
ಕೇಂದ್ರ ಸರ್ಕಾರ ಪರ ವಕೀಲರು, ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರಣದ ಸದಸ್ಯತ್ವಕ್ಕೆ ನ್ಯಾ. ದೇಸಾಯಿ ಅರ್ಜಿ ಹಾಕಿದ್ದು, ಹುದ್ದೆಯನ್ನು ನಿರಾಕರಿಸುವುದಿಲ್ಲ. ಒಂದೊಮ್ಮೆ ನಿರಾಕರಿಸಿದರೆ ಡಿಬಾರ್ ಆಗಬೇಕಾಗುತ್ತದೆ ಎಂಬ ಘೋಷಣೆಗೆ ಸಹಿ ಹಾಕಿದ್ದರು. ಅದರ ಆಧಾರದಲ್ಲಿ ಈ ಆದೇಶ ಮಾಡಲಾಗಿತ್ತು ಎಂದು ಪೀಠಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಮುಡಾ: ಸಿಎಂ ಸೇರಿ ನಾಲ್ವರ ವಿರುದ್ಧ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿದ ಲೋಕಾಯುಕ್ತ