IND vs AUS 1st Test: ಪರ್ತ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಮೊದಲ ದಿನವೇ 150 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಅದೇ ದಿನ ಬ್ಯಾಟಿಂಗ್ಗೆ ಬಂದ ಆಸೀಸ್ ಕೂಡ ಕಳಪೆ ಪ್ರದರ್ಶನ ತೋರಿತು. ಭಾರತೀಯ ಬೌಲಿಂಗ್ ದಾಳಿಗೆ ಸಿಲುಕಿದ ಕಾಂಗರೂ ಪಡೆ ದಿನದಾಟದ ಅಂತ್ಯಕ್ಕೆ 67 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಎರಡನೇ ದಿನವಾದ ಇಂದು ಮತ್ತೆ 3 ವಿಕೆಟ್ ಪತನಗೊಂಡವು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 104 ರನ್ಗಳಿಗೆ ಆಲೌಟ್ ಆಗಿದೆ. ಸದ್ಯ ಭಾರತ 46 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ಬ್ಯಾಟರ್ಗಳು ವಿಫಲರಾದರೂ ಬೌಲರ್ಗಳು ಅದ್ಭುತ ಪ್ರದರ್ಶನ ತೋರಿದರು. ಮೊದಲ ದಿನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ 4 ವಿಕೆಟ್ಗಳನ್ನು ಉರುಳಿಸುವ ಮೂಲಕ ಎದುರಾಳಿ ತಂಡವನ್ನು ಧ್ವಂಸ ಮಾಡಿದ್ದರು. ಭಾರತದ ಮೇಲೆ ಪ್ರಾಬಲ್ಯ ಸಾಧಿಸಬೇಕೆಂಬ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ಆಸೀಸ್ಗೆ ಮೊದಲ ದಿನದಲ್ಲಿ ಭಾರತೀಯ ಬೌಲರ್ಗಳು ಶಾಕ್ ನೀಡಿ ಪ್ರಮುಖ 6 ವಿಕೆಟ್ಗಳನ್ನು ಉರುಳಿಸಿದರು.
ಎರಡನೇ ದಿನ ಆಸ್ಟ್ರೇಲಿಯಾ 67 ರನ್ನೊಂದಿಗೆ ಆಟ ಆರಂಭಿಸಿತು. ಬುಮ್ರಾ ತಮ್ಮ ದಿನದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಅಲೆಕ್ಸ್ ಕ್ಯಾರಿ (21) ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾಕ್ಕೆ ದೊಡ್ಡ ಹೊಡೆತ ನೀಡಿದರು. ಬಳಿಕ ಹರ್ಷಿತ್ ರಾಣಾ, ನಾಥನ್ ಲಿಯಾನ್ ವಿಕೆಟ್ ಅನ್ನು ಉರುಳಿಸಿದರು. ಇದರೊಂದಿಗೆ 9 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 100ರ ಗಡಿ ತಲುಪುವುದು ಕಷ್ಟವೆಂದೇ ಭಾವಿಸಲಾಗಿತ್ತು.