ಹೈದರಾಬಾದ್: ವಿಶ್ವದಲ್ಲಿ ಕ್ರಿಕೆಟ್ ಮತ್ತು ಫುಟ್ಬಾಲ್ ಕ್ರೀಡೆಗಳಿಗೆ ಭಾರಿ ಕ್ರೇಜ್ ಇದೆ. ಅದರಲ್ಲೂ ಫುಟ್ಬಾಲ್ ಕ್ರೀಡೆ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕ್ರೀಡೆ ಆಗಿಯೂ ಖ್ಯಾತಿ ಪಡೆದಿದೆ. ಜೊತೆಗೆ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆಗಳಲ್ಲೂ ಅಗ್ರ ಸ್ಥಾನದಲ್ಲಿದೆ. ಬಹುತೇಕ ದೇಶಗಳಲ್ಲಿ ಫುಟ್ಬಾಲ್ ಆಡುವವರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ಫುಟ್ಬಾಲ್ ಅತೀ ಹೆಚ್ಚು ಖ್ಯಾತಿಗಳಿಸಿದೆ. ಇದರ ಜಾಗತಿಕ ಮಾರ್ಕೆಟ್ ವ್ಯಾಲ್ಯೂ ಕೂಡ 52 ಲಕ್ಷ ಕೋಟಿ ರೂ ಆಗಿದೆ. ಹಾಗಾಗಿ ಈ ಕ್ರಿಡೆಯಲ್ಲಿ ಆಡುವ ಆಟಗಾರರು ಒಳ್ಳೆಯ ಸಂಭಾವನೆ ಪಡೆದುಕೊಳ್ಳುತ್ತಾರೆ.
ಆದರೆ ಆಟಗಾರನೊಬ್ಬ ಕೇವಲ 42 ನಿಮಿಷಗಳ ಪಂದ್ಯವನ್ನು ಆಡಲು ಬರೋಬ್ಬರಿ ₹895 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಹೌದು, ಬ್ರೆಜಿಲ್ ಫುಟ್ಬಾಲ್ ತಂಡದ ಮಾಜಿ ನಾಯಕ ನೇಮಾರ್ ಲೀಗ್ ಒಂದರಲ್ಲಿ ಆಡಿದ್ದಕ್ಕೆ ಭಾರೀ ಸಂಭಾವನೆ ಪಡೆದಿದ್ದಾರೆ. 2023 ರಲ್ಲಿ, ನೇಮರ್ ಸೌದಿ ಅರೇಬಿಯನ್ ಪ್ರೊ ಲೀಗ್ ತಂಡ ಸೇರಿಕೊಂಡರು. ಇದರೊಂದಿಗೆ ಸೌದಿ ಫ್ರಾಂಚೈಸಿ 2024ರ ಋತುವಿಗಾಗಿ ಅವರಿಗೆ 895 ಕೋಟಿ ರೂ. ನೀಡಿ ಒಪ್ಪಂದ ಮಾಡಿಕೊಂಡಿತ್ತು.
ಆದರೆ 2024ರಲ್ಲಿ, ನೇಮಾರ್ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದರು. ಒಟ್ಟು 42 ನಿಮಿಷಗಳ ಪಂದ್ಯವನ್ನು ಮಾತ್ರ ಆಡಿದ್ದರು. ಈ ಲೆಕ್ಕಾಚಾರದ ಪ್ರಕಾರ ಪ್ರತಿ ನಿಮಿಷಕ್ಕೆ ಅವರು 21.30 ಕೋಟಿ ರೂ. ಸಂಭಾವನೆ ಪಡೆದುಕೊಂಡಂತಾಯ್ತು. ಮತ್ತೊಂದು ಇಂಟ್ರೆಸ್ಟಿಂಗ್ ವಿಷಯವೆಂದರೇ ಅವರು ಆಡಿದ ಎರಡು ಪಂದ್ಯಗಳಲ್ಲಿ ಕೇವಲ 45 ಬಾರಿ ಮಾತ್ರ ಚೆಂಡನ್ನು ಪಾಸ್ ಮಾಡಿದ್ದರು.
ಏತನ್ಮಧ್ಯೆ, ಸೌದಿ ಅರೇಬಿಯಾದ ಫ್ರಾಂಚೈಸಿ ಮತ್ತೊಂದು ಋತುವಿಗಾಗಿ ನೇಮರ್ ಅವರೊಂದಿಗಿನ ಒಪ್ಪಂದವನ್ನು ಮುಂದುವರಿಸಿದೆ. 2025ರ ಋತುವಿಗಾಗಿ 107 ಮಿಲಿಯನ್ ಡಾಲರ್ (ಸುಮಾರು ರೂ. 925.18 ಕೋಟಿ) ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಜೂನ್‌ನಲ್ಲಿ ಇವರ ಒಪ್ಪಂದದ ಅವಧಿ ಮುಕ್ತಾಯವಾಗಲಿದೆ. ಆದರೆ ನೇಮರ್ ಪದೇ ಪದೇ ಗಾಯಗೊಳ್ಳುತ್ತಿರುವುದು ಫ್ರಾಂಚೈಸಿಗೆ ದೊಡ್ಡ ಸಮಸ್ಯೆ ಆಗಿದ್ದು ಈ ಋತುವಿನ ಬಳಿಕ ಫ್ರಾಂಚೈಸಿ ಅವರೊಂದಿಗಿನ ಒಪ್ಪಂದವನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಕೇಳಿ ಬರುತ್ತಿದೆ.
ಕೊನೆಯ ಪಂದ್ಯ: 2026 ವಿಶ್ವಕಪ್ ತನ್ನ ಫುಟ್ಬಾಲ್ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು ನೇಮರ್ ಹೇಳಿದ್ದಾರೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ಟೂರ್ನಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸುವುದಾಗಿ ನೇಮರ್ ಹೇಳಿದ್ದಾರೆ.
ಇದನ್ನೂ ಓದಿ: 16 ಸಿಕ್ಸರ್, 42 ಬೌಂಡರಿ, 346 ರನ್!: ಭಾರತೀಯ ಬ್ಯಾಟರ್ ಸ್ಪೋಟಕ ಆಟಕ್ಕೆ ಹಳೆ ದಾಖಲೆ ಧೂಳಿಪಟ!