Yograj Singh statement: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಟೀಂ ಇಂಡಿಯಾದ ಮಾಜಿ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸದ್ಯ ಅವರ ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.
ಖ್ಯಾತ ಪತ್ರಕರ್ತ ಸಮ್ದೀಶ್ ಭಾಟಿಯಾ ಅವರ ಯೂಟ್ಯೂಬ್ ಚಾನಲ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿರುವ ಯೋಗರಾಜ್ ಸಿಂಗ್ ಅವರು, ಕಪಿಲ್ ದೇವ್ ಅವರನ್ನು ಗುಂಡಿಕ್ಕಿ ಕೊಲ್ಲಲು ಮನೆ ಮುಂದೆ ಹೋಗಿದ್ದೆ ಎಂದು ಹೇಳಿದ್ದಾರೆ. 'ಕಪಿಲ್ ದೇವ್ ಟೀಂ ಇಂಡಿಯಾ ನಾಯಕರಾದ ಬಳಿಕ ಯಾವುದೇ ಕಾರಣವಿಲ್ಲದೆ ನನ್ನನ್ನು ತಂಡದಿಂದ ಕೈಬಿಟ್ಟಿದ್ದರು. ಈ ವಿಚಾರಕ್ಕೆ ನನ್ನ ಪತ್ನಿ ಕೂಡ ಕೋಪಗೊಂಡಿದ್ದಳು. ಇದನ್ನು ಪ್ರಶ್ನಿಸಲು ಬಯಸಿದ್ದಳು. ಆದರೆ ನಾನು ಕಪಿಲ್ ಬಳಿ ಮಾತನಾಡಿ ಬರುತ್ತೇನೆ ಎಂದು ಹೇಳಿ ಪಿಸ್ತೂಲ್ ತೆಗೆದುಕೊಂಡು ಅವರ ಮನೆಗೆ ಹೋಗಿದ್ದೆ.
ಬಳಿಕ ಬಾಗಿಲ್ಲನ್ನು ತಟ್ಟಿದ್ದೆ. ಈ ವೇಳೆ ಅವರು ತಾಯಿ ಮತ್ತು ಸಹೋದರನೊಂದಿಗೆ ಹೊರಬಂದರು. ಇದೇ ಕಾರಣಕ್ಕೆ ನಾನು ಸುಮ್ಮನಾದೆ. ಆದರೂ ಅವರನ್ನು ನಿಂದಿಸಿದೆ. ನಿಮ್ಮಿಂದಾಗಿ ನಾನು ಕ್ರಿಕೆಟ್ ಕಳೆದುಕೊಂಡೆ. ಇದೇ ಕಾರಣಕ್ಕೆ ನಾನು ನಿಮ್ಮ ತಲೆಗೆ ಗುಂಡು ಹಾರಿಸಲು ಬಯಸಿದ್ದೆ. ಆದರೆ ಹಾಗೆ ಮಾಡಲು ಮನಸಾಗಲಿಲ್ಲ, ಏಕೆಂದರೆ ನಿನಗೆ ತಾಯಿ ಇದ್ದಾರೆ ಎಂದು ಹೇಳಿ ವಾಪಸ್ ಬಂದೆ. ಅಂದೇ ನಾನು ಜೀವನದಲ್ಲಿ ಕ್ರಿಕೆಟ್ ಆಡದಿರಲು ನಿರ್ಧರಿಸಿದೆ ಎಂದು ಯೋಗರಾಜ್ ಹೇಳಿದ್ದಾರೆ.
ಮುಂದುವರೆದು ಮಾತನಾಡುತ್ತ, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಬಳಿಕ ನಾನು ಮೊದಲು ಕಪಿಲ್ ದೇವ್ಗೆ ಮೆಸ್ಸೇಜ್ ಮಾಡಿದೆ. ವಿಶ್ವಕಪ್ನಲ್ಲಿ ನನ್ನ ಮಗ ಯುವರಾಜ್ ಸಿಂಗ್ ನಿಮಗಿಂತಲೂ ಆದ್ಭುತವಾಗಿ ಆಡಿದ್ದಾರೆ ಎಂದು ಹೇಳಿದೆ. ಇದಕ್ಕೆ ಕಪಿಲ್ ಕೂಡ ಪ್ರತಿಕ್ರಿಯಿಸಿ, ಮುಂದಿನ ಜನ್ಮದಲ್ಲಿ ನಾವಿಬ್ಬರು ಅಣ್ಣ-ತಮ್ಮಂದಿರಾಗಿ ಒಂದೇ ಕಡೆ ಜನ್ಮ ಪಡೆಯೋಣ ಎಂದು ಹೇಳಿದ್ದಾಗಿ ಯೋಗರಾಜ್ ಸಿಂಗ್ ತಿಳಿಸಿದರು.