ಬೇಗುಸರೈ : ಬಿಹಾರದ ಬೇಗುಸರೈನಲ್ಲಿ ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೋನಾಕ್ಷಿ ಹಾಗೂ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ) ಎಂಬ ಇಬ್ಬರು ಮಹಿಳೆಯರು ತಮ್ಮ ಕುಟುಂಬಗಳ ವಿರೋಧದ ನಡುವೆಯೂ, ಮನೆ ಬಿಟ್ಟು ಹೋಗಿ ದೆಹಲಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಕುಟುಂಬದಿಂದ ಪ್ರಾಣಾಪಾಯ ಇರುವುದರಿಂದ ಈ ಜೋಡಿ ಪೊಲೀಸರ ಮೊರೆ ಹೋಗಿದ್ದಾರೆ.
ಕಳೆದ ಒಂಬತ್ತು ತಿಂಗಳುಗಳಿಂದ ರಿಲೇಶನ್ಶಿಪ್ನಲ್ಲಿರುವ ಇವರು ಜನವರಿ 10 ರಂದು ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು ದೆಹಲಿಗೆ ಪ್ರಯಾಣಿಸಿದ್ದರು. ಕುಟುಂಬದವರಿಂದ ವಿರೋಧ ಹಾಗೂ ಜೀವಕ್ಕೆ ಹೆದರಿದ ಇಬ್ಬರೂ, ತಮ್ಮನ್ನು ಒಟ್ಟಿಗೆ ವಾಸಿಸಲು ಬಿಡದಿದ್ದರೆ ಪ್ರಾಣವನ್ನೇ ಕಳೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಬಿಎ ಮೊದಲ ವರ್ಷದ 1 ವಿದ್ಯಾರ್ಥಿನಿ ಮೀನಾಕ್ಷಿ, ಸೋನಾಕ್ಷಿಗೆ ಟ್ಯೂಷನ್ ಹೇಳುತ್ತಿದ್ದರು. ಅವರಿಬ್ಬರ ಗೆಳೆತನ ರೊಮ್ಯಾಂಟಿಕ್ ರಿಲೇಶನ್ಶೀಪ್ ಆಗಿ ಬೆಳೆಯಿತು. ಇವರಿಬ್ಬರ ಸಂಬಂಧವನ್ನು ವಿಶೇಷವಾಗಿ ಮೀನಾಕ್ಷಿಯ ಕುಟುಂಬ ತೀವ್ರವಾಗಿ ನಿರಾಕರಿಸಿತ್ತು. ಮನೆಯವರ ಒತ್ತಡ ಹಾಗೂ ಬೆದರಿಕೆಯಿಂದ ಜೋಡಿ ತಮ್ಮ ಮನೆಗಳನ್ನು ತೊರೆದು ಬೇರೆಡೆಗೆ ಹೋಗಲು ನಿರ್ಧರಿಸಿದರು. ದೆಹಲಿಯ ಉತ್ತಮ್ ನಗರಕ್ಕೆ ಪ್ರಯಾಣ ಬೆಳೆಸಿದ ಜೋಡಿ ಅಲ್ಲಿನ ದೇವಸ್ಥಾನವೊಂದರಲ್ಲಿ ಮದುವೆ ಆಗಿದ್ದಾರೆ. ವಿಷಯ ತಿಳಿದ ಮೀನಾಕ್ಷಿ ಕುಟುಂಬ, ಚೆರಿಯಾಬರಿಯಾರ್ಪುರ ಪೊಲೀಸ್ ಠಾಣೆಯಲ್ಲಿ ಸೋನಾಕ್ಷಿ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ಆದರೆ, ಜೋಡಿ ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿ, ತಮ್ಮ ಕಥೆ ಹಂಚಿಕೊಂಡಿದ್ದಾರೆ. ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಒಬ್ಬರನ್ನು ಬಿಟ್ಟು ಒಬ್ಬರು ಬದುಕಲು ಸಾಧ್ಯವಿಲ್ಲ. ನಾನು ಸೋನಾಕ್ಷಿಯನ್ನು ನನ್ನ ಪತಿ ಎಂದು ಪರಿಗಣೀಸುತ್ತೇನೆ ಎಂದು ಮೀನಾಕ್ಷಿ ಹೇಳಿದ್ದಾರೆ.
ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು, ಇಬ್ಬರೂ ವಯಸ್ಕರಾಗಿರುವ ಕಾರಣ ಮಹಿಳೆಯರನ್ನು ವೀಕ್ಷಣಾ ಗೃಹಕ್ಕೆ(observation home) ಕಳುಹಿಸಿದ್ದಾರೆ.
ಈ ಬಗ್ಗೆ ಪೊಲೀಸರು ಹೇಳುವುದಿಷ್ಟು: ಇಬ್ಬರೂ ವಯಸ್ಕರರಿದ್ದಾರೆ, ಹಾಗಾಗಿ ನಾವು ನಮ್ಮ ತನಿಖೆಯನ್ನು ಮುಂದುವರಿಸುತ್ತೇವೆ. ನ್ಯಾಯಾಲಯದ ವಿಚಾರಣೆಯ ನಂತರ, ಕೋರ್ಟ್ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚೆರಿಯಬರಿಯಾರ್ಪುರದ ಸ್ಟೇಷನ್ ಹೌಸ್ ಆಫೀಸರ್ (SHO) ಸುಬೋಧ್ ಕುಮಾರ್ ತಿಳಿಸಿದರು.
ಭಾರತದಲ್ಲಿ ಇದಕ್ಕಿಲ್ಲ ಕಾನೂನು ಮಾನ್ಯತೆ: ಈ ಪ್ರಕರಣ ಇದೀಗ ಮತ್ತೆ ಭಾರತದಲ್ಲಿ ಸಲಿಂಗ ವಿವಾಹಗಳ ಕಾನೂನು ಸ್ಥಿತಿಯ ಬಗ್ಗೆ ಗಮನ ಸೆಳೆದಿದೆ. ಸುಪ್ರೀಂಕೋರ್ಟ್ 2018ರಲ್ಲಿ ಸೆಕ್ಷನ್ 377ರ ಭಾಗಗಳನ್ನು ರದ್ದುಗೊಳಿಸುವ ಮೂಲಕ ಸಲಿಂಗ ಸಂಬಂಧಗಳನ್ನು ಅಪರಾಧ ಮುಕ್ತಗೊಳಿಸಿದ್ದರೂ, ದೇಶದಲ್ಲಿ ಸಲಿಂಗ ವಿವಾಹಗಳು ಕಾನೂನು ಬಾಹಿರವಾಗಿಯೇ ಉಳಿದಿವೆ. ಅಂತಹ ಒಕ್ಕೂಟಗಳಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಮತ್ತು ಈ ವಿಷಯವನ್ನು ಸಂಸತ್ತು ಪರಿಗಣಿಸಬೇಕು ಎಂಬ ಒತ್ತಾಯಗಳಿವೆ.
ಸುಪ್ರೀಂ ಕೋರ್ಟ್ನ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅವರು, ಸಲಿಂಗ ಜೋಡಿಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುವಂತಹ ಹಕ್ಕುಗಳನ್ನು ನಾಗರಿಕ ಸಂಘಗಳು ಪಡೆಯಬೇಕು. ನಾಗರಿಕ ಪಾಲುದಾರಿಕೆ ಎಂದು ಕರೆಯಲ್ಪಡುವ ನಾಗರಿಕ ಒಕ್ಕೂಟವು ಹಲವಾರು ದೇಶಗಳಲ್ಲಿ ಸ್ಥಾಪಿತವಾದ ವಿವಾಹದಂತೆಯೇ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ವ್ಯವಸ್ಥೆಯಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಾವಿಗೂ ಮುನ್ನ ವಿಡಿಯೋ ಮಾಡಿಟ್ಟು, ಮದುವೆ ಉಡುಪಿನಲ್ಲೇ ದಂಪತಿ ಆತ್ಮಹತ್ಯೆ!