ರಾಮನಗರ: ಜಿಲ್ಲೆಯಲ್ಲಿರುವ ಪ್ರವಾಸಿ ತಾಣ ಕಣ್ವ ಜಲಾಶಯ ಭರ್ತಿಯಾಗಿದೆ. ಸುಮಾರು ಎರಡು ದಶಕಗಳಿಂದ ಭರ್ತಿಯಾಗದೆ ಉಳಿದಿದ್ದ ಜಲಾಶಯಕ್ಕೆ ಈಗ ಜೀವಕಳೆ ಬಂದಿದೆ. ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ಇಂದು ಶಾಸಕ ಸಿ.ಪಿ.ಯೋಗೇಶ್ವರ್ ಕಣ್ವ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದಲ್ಲಿ ಸ್ವತಃ ವಾಟರ್ ಬೈಕ್ ರೈಡ್ ಮೂಲಕ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, "ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಲ್ಲಾ ಕಾಮಗಾರಿಯನ್ನು ಕೂಡ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲಾ ಕಾಮಗಾರಿಗಳು ಮುಗಿದು ಪ್ರವಾಸಿಗರಿಗೆ ಅನುಕೂಲವಾಗಲಿದೆ" ಎಂದು ತಿಳಿಸಿದರು.
ಕಣ್ವ ಜಲಾಶಯದ ಇತಿಹಾಸ ನೋಟ: ಚನ್ನಪಟ್ಟಣ ತಾಲೂಕಿನಲ್ಲಿರುವ ಕಣ್ವ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 32 ಅಡಿ. ಸದ್ಯ 30.5 ಅಡಿ ನೀರು ಸಂಗ್ರಹವಾಗಿದೆ. ಮಾಗಡಿಯಲ್ಲಿ ಹುಟ್ಟುವ ಕಣ್ವ ನದಿಗೆ 1946ರಲ್ಲಿ ಚನ್ನಪಟ್ಟಣ ತಾಲೂಕಿನ ಗಡಿಭಾಗದಲ್ಲಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಸುಮಾರು 776 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಜಲಾಶಯ ತಾಲೂಕಿನ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ವಯಂಚಾಲಿತ ಸೈಫನ್ ವ್ಯವಸ್ಥೆ ಹೊಂದಿರುವ ಜಲಾಶಯಕ್ಕೆ ದಶಕದ ಹಿಂದೆ ಕ್ರಸ್ಟ್ ಗೇಟ್ ಅಳವಡಿಸಲಾಗಿದೆ.
ಈ ಹಿಂದೆ 2000ನೇ ಇಸವಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಜಲಾಶಯ ಭರ್ತಿಯಾಗಿ ಸ್ವಯಂಚಾಲಿತ ಸೈಫನ್ ಮೂಲಕ ನೀರು ಕಣ್ವನದಿಗೆ ಹರಿದಿತ್ತು. ಅದಾದ ನಂತರ ಜಲಾಶಯ ಭರ್ತಿಯಾಗಿರಲಿಲ್ಲ. ಮಾಗಡಿಯ ವೈ.ಜಿ.ಗುಡ್ಡ ಜಲಾಶಯ ನಿರ್ಮಾಣವಾದ ನಂತರ ಕಣ್ವ ಜಲಾಶಯಕ್ಕೆ ಎತ್ತರ ಪ್ರದೇಶದಿಂದ ನೀರು ಹರಿಯುವಿಕೆ ಗಣನೀಯವಾಗಿ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಣ್ವ ಜಲಾಶಯ ಭರ್ತಿಯಾಗಿರಲಿಲ್ಲ. ಕಳೆದ ಐದಾರು ವರ್ಷಗಳಿಂದ ಇಗ್ಗಲೂರು ಹೆಚ್.ಡಿ.ದೇವೇಗೌಡ ಬ್ಯಾರೇಜಿನಿಂದ ಏತ ನೀರಾವರಿ ಮೂಲಕ ಕಣ್ವ ಜಲಾಶಯಕ್ಕೆ ನೀರು ಹರಿಸಲಾಯಿತು. ನಂತರ ನಿರಂತರ ಮಳೆಯ ಪರಿಣಾಮ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯ ಮಟ್ಟಕ್ಕೆ ಬಂದು ತಲುಪಿತ್ತು.
ಪ್ರವಾಸಿ ತಾಣವಾಗಲು ಕಣ್ವ ಜಲಾಶಯ ಸಜ್ಜು: ಕಣ್ವ ಮಹರ್ಷಿ ತಪಸ್ಸು ಮಾಡಿದ್ದರು ಎಂಬ ಪ್ರಸಿದ್ಧಿ ಪಡೆದಿರುವ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಣ್ವ ಜಲಾಶಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಪಟ್ಟಣದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಜಲಾಶಯವನ್ನು 1946ರಲ್ಲಿ ಅಂದಿನ ಮೈಸೂರಿನ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯ ನಿರ್ಮಿಸಿದ್ದರು. ಸುತ್ತಮುತ್ತಲು ಇರುವ ಆಕರ್ಷಕ ಹಸಿರುಸಿರಿಯ ಬೆಟ್ಟಗುಡ್ಡಗಳ ನಡುವೆ ಇರುವ ಜಲಾಶಯ ನೈಸರ್ಗಿಕ ಸೌಂದರ್ಯದ ಮಡಿಲಿನ ಹಾಗೆ ಇದೆ. ಕಣ್ವ ಜಲಾಶಯವು ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ಸುಮಾರು 65 ಕಿ. ಮೀ. ದೂರದಲ್ಲಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಕಣ್ವ ಜಲಾಶಯದ ಸೊಬಗನ್ನು ವೀಕ್ಷಿಸಲು ಬೆಂಗಳೂರು, ಮೈಸೂರು ಸೇರಿದಂತೆ ದೂರದೂರುಗಳಿಂದ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುವುದು ಇಲ್ಲಿಯ ವಿಶೇಷ.
ಸದ್ಯಕ್ಕೆ ಜಲಾಶಯದ ಬಳಿ ಊಟ, ತಿಂಡಿ ವ್ಯವಸ್ಥೆಗೆ ಯಾವುದೇ ಹೋಟೆಲ್ ಇಲ್ಲ. ಸಣ್ಣಪುಟ್ಟ ಅಂಗಡಿಗಳು ಇವೆ. ಶನಿವಾರ, ಭಾನುವಾರ ಪಾನಿಪುರಿ, ಮಸಾಲಪುರಿ, ಗೋಬಿ ಅಂಗಡಿಗಳು ತೆರೆಯುತ್ತವೆ. ಜಲಾಶಯ ವೀಕ್ಷಣೆಗೆ ಬರುವವರು ಜೊತೆಯಲ್ಲಿ ತಿಂಡಿ, ಊಟ ಒಯ್ಯುವುದು ಉತ್ತಮ. ಜಲಾಶಯ ವೀಕ್ಷಣೆಗೆ ಬೆಳಿಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಸಮಯ ಉತ್ತಮ. ನಂತರ ಈ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಣ್ವ ಜಲಾಶಯ ಸ್ಥಳವನ್ನ ಪ್ರವಾಸಿ ತಾಣವಾಗಿ ಮಾಡಲು ಹೊರಟಿದ್ದು, ಸುಸಜ್ಜಿತ ಕಟ್ಟಡ ಸೇರಿದಂತೆ ನೀರಿನಲ್ಲಿ ಕ್ರೀಡಾ ಚಟುವಟಿಕೆ ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದೆ.
ಇದನ್ನೂ ಓದಿ: ಮರು ಭೂಮಾಪನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ : ಡಿಸಿಎಂ ಡಿ.ಕೆ. ಶಿವಕುಮಾರ್ - D K SHIVAKUMAR