ಬೀಡ್ (ಮಹಾರಾಷ್ಟ್ರ): ಬೀಡ್ ಜಿಲ್ಲೆಯ ಸರಪಂಚ್ ಸಂತೋಷ್ ದೇಶಮುಖ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ತಲೆಮರೆಸಿಕೊಂಡ ಓರ್ವನನ್ನು ಈವರೆಗೂ ಬಂಧಿಸಿಲ್ಲ. ಆತನನ್ನು ಬಂಧಿಸುವಂತೆ ಮೃತ ಸಂತೋಷ್ ಸಹೋದರ ಧನಂಜಯ್ ದೇಶಮುಖ್ ತಮ್ಮ ಸ್ನೇಹಿತರ ಸಹಿತ ಬೃಹತ್ ನೀರಿನ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸಿದರು.
ಸಂತೋಷ್ ದೇಶಮುಖ್ ಹತ್ಯೆಯಾಗಿ ತಿಂಗಳು ಕಳೆದಿದ್ದು, ವಾಲ್ಮೀಕ್ ಕರಾದ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈವರೆಗೂ ಪೊಲೀಸರು ಆತನನ್ನು ಬಂಧಿಸಿಲ್ಲ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಧನಂಜಯ್ ದೇಶಮುಖ್ ನೀರಿನ ಟ್ಯಾಂಕ್ ಮೇಲೆ ಹತ್ತಿ 'ಶೋಲೆ ಶೈಲಿಯ' ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮರಾಠಾ ಮೀಸಲಾತಿ ಚಳವಳಿಯ ಬೆಂಬಲಿಗರಾದ ಮನೋಜ್ ಜರಂ, ಸಂಸದ ಬಜರಂಗ್ ಸೋನಾವಾನೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕೌತ್ ಅವರು ನೀರಿನ ಟ್ಯಾಂಕ್ ಮೇಲಿಂದ ಕೆಳಗಿಳಿಯುವಂತೆ ಮನವಿ ಮಾಡಿದ ಬಳಿಕ ಧನಂಜಯ್ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.
ಟ್ಯಾಂಕ್ ಏರುತ್ತಿದ್ದಂತೆ ಅಸ್ವಸ್ಥ: ಧನಂಜಯ್ ದೇಶಮುಖ್ ನೀರಿನ ಟ್ಯಾಂಕ್ ಏರುತ್ತಿದ್ದಂತೆ ಅಸ್ವಸ್ಥಗೊಂಡಿದ್ದು ಕಂಡು ಬಂದಿತು. ಆಯಾಸ ಉಂಟಾಗಿದ್ದರಿಂದ ಟ್ಯಾಂಕ್ ಮೇಲೆಯೇ ಕುಳಿತು ಪ್ರತಿಭಟನೆ ಮುಂದುವರೆಸಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಎಷ್ಟು ಮನವಿ ಮಾಡಿದರೂ ಕೆಳಗಿಳಿದಿರಲಿಲ್ಲ. ಬಳಿಕ ಸಂಸದ ಬಜರಂಗ್ ಸೋನಾವಾನೆ, ಮನೋಜ್ ಜರಂ ಹಾಗೂ ಎಸ್ಪಿ ನವನೀತ್ ಕೌತ್ ಅವರು ಈ ಬಗ್ಗೆ ಎಸ್‌ಐಟಿ, ಸಿಐಡಿ ಮತ್ತು ಸರ್ಕಾರಿ ಪ್ರತಿನಿಧಿಗಳೊಂದಿಗೆ ಮಾತನಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಧನಂಜಯ್ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಟ್ಯಾಂಕ್ನಿಂದ ಕೆಳಗಿದರು.
ಆರೋಪಿಗಳನ್ನು ಗಲ್ಲಿಗೇರಿಸಿ: ನೀರಿನ ಟ್ಯಾಂಕ್ನಿಂದ ಕೆಳಗಿದ ಧನಂಜಯ್, ನನ್ನ ಸಹೋದರನನ್ನು ಕೊಂದವರನ್ನು ಗಲ್ಲಿಗೇರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅದಕ್ಕೆ ಧನಿಗೂಡಿಸಿ ಗ್ರಾಮಸ್ಥರು, ಕೊಲೆ ಮಾಡಿದ ಆರೋಪಿಗಳಿಗೆ ಮರಣದಂಡನೆ ನೀಡುವಂತೆ ಒತ್ತಾಯಿಸಿದರು.
ಸಂತೋಷ್ ದೇಶಮುಖ್ ಹತ್ಯೆಯಿಂದಾಗಿ ಬೀಡ್-ಪರ್ಭಾನಿ ಜಿಲ್ಲೆಗಳಲ್ಲಿ ಸಾಮಾಜಿಕ ಉದ್ವಿಗ್ನತೆ ಉಂಟಾಗಿದ್ದು, ಇದು ರಾಜಕೀಯ ಕೆಸರೆರಚಾಟಕ್ಕೂ ದಾರಿ ಮಾಡಿಕೊಟ್ಟಿದೆ. ಹತ್ಯೆಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತನಿಖಾ ತಂಡ ಬಲೆ ಬೀಸಿದೆ.
ಇದನ್ನೂ ಓದಿ: ಪೊಲೀಸರು - ಲಾರೆನ್ಸ್ ಬಿಷ್ಣೋಯ್ ಸಹಚರರ ನಡುವೆ ಗುಂಡಿನ ಚಕಮಕಿ: ಮೂವರ ಬಂಧನ - LAWRENCE BISHNOI ASSOCIATES ARREST