ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಅನುಮಾನಸ್ಪಾದವಾಗಿ ಪಾರ್ಕಿಂಗ್ ಮಾಡಿದ್ದ ಅಪರಿಚಿತ ಕಾರಿನ ಮಾಲೀಕನ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಿವರಾಜ್ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಾರುತಿ ಇಕೋ ಕಾರನ್ನ ವಶಕ್ಕೆ ಪಡೆಯಲಾಗಿದೆ.
ಜ.10ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಜ್ ಅವರಿಗೆ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರನ್ನ ತೆರವುಗೊಳಿಸುವಂತೆ ದೂರು ಬಂದಿತ್ತು. ಬಳಿಕ ಸ್ಥಳಕ್ಕೆ ಹೋಗಿ ನಂಬರ್ ಪ್ಲೇಟ್ ನಮೂದಿಸಿಕೊಂಡು ಕಾರಿನ ಮಾಲೀಕ ಜಾನ್ ಮಾರ್ಟಿನ್ ಎಂಬುವರ ಮೊಬೈಲ್ ನಂಬರ್ಗೆ ಕರೆ ಮಾಡಿದ್ದರು. ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರನ್ನ ತೆರವುಗೊಳಿಸುವಂತೆ ಸೂಚಿಸಿದ್ದರು. ತಮ್ಮ ಕಾರನ್ನ ವಿವೇಕನಗರದ ಎನ್ಜಿವಿ ಬಳಿ ನಿಲ್ಲಿಸುವುದಾಗಿ ಜಾನ್ ಹೇಳಿದ್ದರು. ಕಾರಿನ ನೋಂದಣಿ ಸಂಖ್ಯೆ ಬಗ್ಗೆ ಟ್ರಾಫಿಕ್ ಪೊಲೀಸರು ಹೇಳಿದಾಗ ಯಾರೋ ಕಾರನ್ನ ಕಳ್ಳತನ ಮಾಡಿರಬಹುದು ಎಂದು ಭಾವಿಸಿಕೊಂಡು ಸ್ಥಳಕ್ಕೆ ಬಂದು ನೋಡಿದಾಗ ಈ ಕಾರು ತಮ್ಮದಲ್ಲ. ಆದರೆ ನನ್ನ ಕಾರಿನ ನಂಬರ್ ಅನ್ನು ತಮ್ಮ ಕಾರಿಗೆ ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದರು.
ಜಾನ್ ಅವರ ದಾಖಲಾತಿಗಳನ್ನ ಪೊಲೀಸರು ಪರಿಶೀಲಿಸಿದಾಗ, ನಕಲಿ ನಂಬರ್ ಅನ್ನು ಯಾರೋ ಬೇರೆ ವ್ಯಕ್ತಿ ಅಳವಡಿಸಿಕೊಂಡಿರುವುದು ಗೊತ್ತಾಗಿದೆ. ಜಾನ್ ಅವರ ಕಾರು ಬೂದು ಬಣ್ಣದ್ದಾಗಿದೆ. ಆದರೆ ಅಪರಿಚಿತ ಕಾರು ಬಿಳ್ಳಿ ಬಣ್ಣದ್ದಾಗಿದ್ದು, ಜಾನ್ ಅವರ ಕಾರಿನ ನಂಬರ್ ಅನ್ನೇ ಅಳವಡಿಸಲಾಗಿದೆ.
ನಕಲಿ ಕಾರಿನ ಮಾಲೀಕನ ಬರುವಿಕೆ ಬಗ್ಗೆ ಕಾದರೂ ಬರದ ಕಾರಣ ಅನುಮಾನಗೊಂಡು ಕಾರನ್ನ ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ವಿವೇಕನಗರ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಟ್ರಾಫಿಕ್ ಹೆಡ್ ಕಾನ್ ಸ್ಟೇಬಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಕ್ಕಳನ್ನು ಕಾಲುವೆಗೆ ಎಸೆದು ಸಾಯಲು ಯತ್ನಿಸಿದ್ದ ತಾಯಿ ಬಚಾವ್; ನಾಲ್ಕು ಮಕ್ಕಳು ಜಲಸಮಾಧಿ
ಇದನ್ನೂ ಓದಿ: 7 ತಿಂಗಳ ಹಿಂದಿನ ವೈದ್ಯ ನಾಪತ್ತೆ ಪ್ರಕರಣ: ಮನೆ ಮಾರಾಟದಿಂದ ಬಂದ ಹಣದಾಸೆಗೆ ಹತ್ಯೆ ಮಾಡಿದ ಮಧ್ಯವರ್ತಿಗಳ ಬಂಧನ