ಜೆರುಸಲೇಂ: ಹಮಾಸ್ ಬಳಿ ಇರುವ ಒತ್ತೆಯಾಳುಗಳ ಬಿಡುಗಡೆಗಾಗಿ ಕತಾರ್ನಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯನ್ ಸಾರ್ ಸೋಮವಾರ ಹೇಳಿದ್ದಾರೆ.
"ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾತುಕತೆಗಳಲ್ಲಿ ಪ್ರಗತಿ ಕಂಡು ಬಂದಿದೆ" ಎಂದು ಜೆರುಸಲೇಂ ಪ್ರವಾಸದಲ್ಲಿರುವ ಡ್ಯಾನಿಶ್ ವಿದೇಶಾಂಗ ಸಚಿವ ಲಾರ್ಸ್ ಲೋಕೆ ರಾಸ್ಮುಸ್ಸೆನ್ ಅವರೊಂದಿಗೆ ಜಂಟಿ ಹೇಳಿಕೆಯಲ್ಲಿ ಸಾರ್ ತಿಳಿಸಿದರು. "ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸಲು ಇಸ್ರೇಲ್ ಬಯಸುತ್ತಿದ್ದು, ಒಪ್ಪಂದಕ್ಕೆ ತಲುಪಲು ಶ್ರಮಿಸುತ್ತಿದೆ" ಎಂದು ಸಾರ್ ಹೇಳಿದರು.
ಕದನ ವಿರಾಮದ ಸ್ವರೂಪ ಹೇಗಿರಬೇಕೆಂಬ ಅಂಶವು ಪರೋಕ್ಷ ಮಾತುಕತೆಗಳಲ್ಲಿ ಪ್ರಮುಖ ಅಡೆತಡೆಯ ವಿಷಯವಾಗಿದೆ. ಶಾಶ್ವತ ಕದನ ವಿರಾಮಕ್ಕೆ ಹಮಾಸ್ ಒತ್ತಾಯಿಸುತ್ತಿದ್ದರೆ, ಕದನ ವಿರಾಮ ತಾತ್ಕಾಲಿಕವಷ್ಟೇ ಎಂದು ಇಸ್ರೇಲ್ ಹೇಳುತ್ತಿದೆ. ಅಗತ್ಯ ಬಿದ್ದರೆ ಮತ್ತೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಆಯ್ಕೆ ತನಗಿರಬೇಕೆಂದು ಇಸ್ರೇಲ್ ಷರತ್ತು ಹಾಕಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ 15 ತಿಂಗಳಿಗೂ ಹೆಚ್ಚು ಕಾಲದ ಯುದ್ಧ ಕೊನೆಗೊಳಿಸಲು ಸದ್ಯ ಕತಾರ್ ರಾಜಧಾನಿ ದೋಹಾದಲ್ಲಿ ಮಾತುಕತೆಗಳು ಆರಂಭವಾಗಿವೆ.
ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಶಿನ್ ಬೆಟ್ ದೇಶೀಯ ಭದ್ರತಾ ಏಜೆನ್ಸಿಯ ಮುಖ್ಯಸ್ಥ ರೋನೆನ್ ಬಾರ್ ನೇತೃತ್ವದ ಇಸ್ರೇಲ್ ನಿಯೋಗವು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಕತಾರ್ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ ಅವರೊಂದಿಗೆ ಚರ್ಚಿಸಲು ಶನಿವಾರ ದೋಹಾಗೆ ಆಗಮಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಝಾ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಕುರಿತು ಕತಾರ್ನಲ್ಲಿ ನಡೆದ ಮಾತುಕತೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ಮತ್ತೊಬ್ಬ ಇಸ್ರೇಲಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಸಕಾರಾತ್ಮಕ ದಿಕ್ಕಿನಲ್ಲಿ ಮಾತುಕತೆಗಳು ನಡೆಯುತ್ತಿವೆ ಹಾಗೂ ತನ್ನ ಷರತ್ತುಗಳನ್ನು ಸಡಿಲಿಸಿರುವ ಇಸ್ರೇಲ್ ಹಮಾಸ್ನ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಅವರು ಹೇಳಿದರು. ಎರಡೂ ಕಡೆಯವರು ಒಪ್ಪಿದರೆ, ಒಪ್ಪಂದವನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳಿಸಬಹುದು ಎಂದು ಅಧಿಕಾರಿ ಹೇಳಿದರು.
ಏತನ್ಮಧ್ಯೆ, ಕತಾರ್ ಇಸ್ರೇಲ್ ಮತ್ತು ಹಮಾಸ್ ಎರಡಕ್ಕೂ ಅಂತಿಮ ಕರಡು ಒಪ್ಪಂದದ ಪ್ರತಿಯನ್ನು ಸಲ್ಲಿಸಿದೆ ಎಂಬ ಮಾಧ್ಯಮ ವರದಿಗಳನ್ನು ಇಸ್ರೇಲ್ ಸರ್ಕಾರದ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ ಎಂದು ಇಸ್ರೇಲ್ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ : ಚೀನಾ ಶಿಲ್ಪಿಯ ಕಣ್ಣಿಗೆ ಬುದ್ಧನಂತೆ ಶಾಂತಿದೂತನಾಗಿ ಕಂಡ ಡೊನಾಲ್ಡ್ ಟ್ರಂಪ್ - BUDDHA LIKE TRUMP STATUES