ಮೈಸೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಸಾಂಸ್ಕೃತಿಕ ನಗರಿಯ ಜನ ಮಾರುಕಟ್ಟೆಯಲ್ಲಿ ಹಣ್ಣು, ಹೂ, ಎಳ್ಳು - ಬೆಲ್ಲ, ಕಬ್ಬು ಸೇರಿದಂತೆ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಖರೀದಿ ಜೋರಾಗಿ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಸುಗ್ಗಿಯ ಹಬ್ಬ ಸಂಕ್ರಾಂತಿಗೆ ತಮ್ಮ ರಾಸುಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ಬಣ್ಣ ಹಾಕಿ, ಧವಸ ಧಾನ್ಯಗಳಿಗೆ ಪೂಜೆ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಸುಗ್ಗಿ ಹಬ್ಬ ಸಂಕ್ರಾಂತಿ ವರ್ಷದ ಮೊದಲ ಹಬ್ಬವಾಗಿದ್ದು, ರೈತಾಪಿ ಜನ ತಮ್ಮ ಕೃಷಿ ಚಟುವಟಿಕೆಗಳನ್ನು ಮುಕ್ತಾಯ ಮಾಡಿ, ಧವಸ- ಧಾನ್ಯಗಳನ್ನು ಮನೆಗೆ ತಂದು ಖುಷಿ ಪಡುವ ಹಬ್ಬ. ಈ ಸಂದರ್ಭದಲ್ಲಿ ತಮಗೆ ಅನ್ನ ನೀಡುವ ರಾಸುಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ವಿವಿಧ ರೀತಿಯ ಬಣ್ಣ ಹಾಕಿ, ಅವುಗಳಿಗೆ ಪೂಜೆ ಸಲ್ಲಿಸಿ ಸಂಜೆ ಕಿಚ್ಚು ಹಾಯಿಸಿ, ಸಂಭ್ರಮ ಪಡಲು ರೈತಾಪಿ ವರ್ಗ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮತ್ತೊಂದು ಕಡೆ ನಗರ ಪ್ರದೇಶದ ಜನ, ಎಳ್ಳು -ಬೆಲ್ಲ ಹಂಚಿ ಪರಸ್ಪರ ಶುಭಾಶಯಗಳ ವಿನಿಮಯಕ್ಕಾಗಿ ಮಾರುಕಟ್ಟೆಯಲ್ಲಿ, ಹಣ್ಣು, ಹೂ, ಎಳ್ಳು -ಬೆಲ್ಲ, ಕೊಬ್ಬರಿ, ಹಾಗೂ ಕಬ್ಬುಗಳನ್ನು ಖರೀದಿ ಮಾಡಲು ಮುಗಿಬಿದ್ದಿದ್ದ ದೃಶ್ಯ ಕಂಡು ಬಂತು. ನಗರದ ಪ್ರಮುಖ ದೇವರಾಜ ಮಾರುಕಟ್ಟೆಯಲ್ಲಿ ಎಲ್ಲು-ಬೆಲ್ಲದ ವ್ಯಾಪಾರಿಗಳು, ಅದರ ಖರೀದಿಗೆ ಬಂದ ಗೃಹಿಣಿಯರನ್ನು ಮಾತನಾಡಿಸಿದಾಗ ಹಬ್ಬದ ಸಿದ್ಧತೆ, ಬೆಲೆ, ವ್ಯಾಪಾರ ವಿಚಾರಗಳ ಬಗ್ಗೆ ಮಾತನಾಡಿದ್ದು ಹೀಗೆ..
ಮಾರುಕಟ್ಟೆ ವ್ಯಾಪಾರಿ ಮಹಾದೇವ ಮಾತನಾಡಿ, ಸಂಕ್ರಾಂತಿ ಹಬ್ಬದ ವ್ಯಾಪಾರ ಬಹಳ ಚೆನ್ನಾಗಿ ನಡೆಯುತ್ತಿದೆ. ವರಲಕ್ಷ್ಮಿ ಹಬ್ಬದಷ್ಟು ದುಬಾರಿ ಬೆಲೆ ಇಲ್ಲ. ಎಲ್ಲ ವಸ್ತುಗಳಿಗೂ ಸ್ಪಲ್ಪ ಕಡಿಮೆ ಆಗಿದೆ. ವರಲಕ್ಷ್ಮಿ ಹಬ್ಬದಲ್ಲಿ ಹೂ 120 ರೂ. ಇತ್ತು. ಈಗ 50 ರೂ. ಅಗಿದೆ. ಏಲಕ್ಕಿ ಬಾಳೆಹಣ್ಣು ಕೆಜಿಗೆ 150 ರೂ. ಈಗ 50 & 60 ಅಗಿದೆ. ಇದರಿಂದ ಜನರು ಸಂತೋಷದಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಒಂದು ಜಲ್ಲೆಯ ಕಬ್ಬಿಗೆ 50 ರೂ. ನಾನು ಚಿಕ್ಕ ಗಡಿಯಾರದ ಬಳಿ ಬಾಳೆಹಣ್ಣು ವ್ಯಾಪಾರ ಮಾಡುತ್ತೇನೆ. ದುಬಾರಿ ಬೆಲೆ ಇಲ್ಲ, ಕಡಿಮೆ ಇದೆ. ಹೀಗಾಗಿ ಜನರು ಬಂದು ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ನಮ್ಮ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿದೆ. ಎಂದು ಹೇಳಿದರು.
ಆಗ ಲಾಭ ಜಾಸ್ತಿ ಬರುತ್ತಿತ್ತು, ಈಗ ಕಡಿಮೆ ಆಗಿದೆ; ಎಳ್ಳು - ಬೆಲ್ಲದ ವ್ಯಾಪಾರಿ ಸಂತೋಷ್ ಮಾತನಾಡಿ, ವ್ಯಾಪಾರ ಸ್ಪಲ್ಪ ಕಡಿಮೆ ಇದೆ. ನಾವು ಬೆಲ್ಲ, ಕೊಬ್ಬರಿ, ಎಳ್ಳು, ಕಡಲೆಬೀಜ ಇನ್ನೂ ಸಂಕ್ರಾತಿ ಹಬ್ಬದ ವಿಶೇಷವಾಗಿ ಎಳ್ಳು- ಬೆಳ್ಳದ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದೇವೆ. ಎಲ್ಲ ರೀತಿಯ ಮಿಕ್ಸಿಂಗ್ ಪ್ಯಾಕೆಟ್ಗೆ 1 ಕೆಜಿಗೆ 150 ರೂ. ದರ ನಿಗದಿ ಮಾಡಿದ್ದೇವೆ. ನಾವು ಕಳೆದ 15 ವರ್ಷದಿಂದ ಸಂಕ್ರಾಂತಿಗೆ ಅಂಗಡಿ ಹಾಕುತ್ತಿದ್ದೇವೆ. ಆವಾಗ ಲಾಭ ಬರುತ್ತಿತ್ತು. ಈಗ ಲಾಭ ಕಡಿಮೆ ಅಗಿದೆ. ನಗರದ ಬಂಡಿಪಾಳ್ಯದಲ್ಲಿ ಅಗತ್ಯವಿರುವ ಬೆಲ್ಲ- ಕೊಬ್ಬರಿ ತಂದು ಅಗತ್ಯ ವಸ್ತುಗಳನ್ನು ಸೇರಿಸಿ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತೇವೆ. ಜನ ಸ್ವಲ್ಪ ಕಡಿಮೆ ಇದ್ದಾರೆ. ವ್ಯಾಪಾರವು ಕೂಡ ಸ್ವಲ್ಪ ಕಡಿಮೆ ನಡೆಯುತ್ತಿದೆ ಎಂದು ಹೇಳಿದರು.
ಗೃಹಣಿ ಹಂಸ ಮಾತನಾಡಿ, ಖರೀದಿ ಚೆನ್ನಾಗಿ ನಡೆಯುತ್ತಿದೆ. ಆದರೆ, ಎಲ್ಲದರ ಬೆಲೆಯೂ ಜಾಸ್ತಿ ಇದೆ. ಅವರೇಕಾಯಿ 100 ರೂ. ಇದೆ. ಗೆಣಸು 60 ರೂ., ಒಂದು ಕೆಜಿ ಎಳ್ಳಿಗೆ 400 ರಿಂದ 100 ವರೆಗೂ ಇದೆ. ಹೂಗಳ ಬೆಳೆಯು ಕೂಡ ಹೆಚ್ಚಿದ್ದು, ಆದರೂ ಕೂಡ ವರ್ಷದ ಮೊದಲ ಹಬ್ಬ ಬರುವ ಸಂಕ್ರಾಂತಿಯನ್ನು ಆಚರಿಸಲೇ ಬೇಕಾಗಿದೆ. ಮನೆಯಲ್ಲಿ ಕಾರ ಪೊಂಗಲ್ ಸಿಹಿ ಪೊಂಗಲ್ ಮಾಡಿ, ಹಸು ಧನ ಕರುಗಳಿಗೆ ಪೂಜೆ ಮಾಡಿ ಕಿಚ್ಚು ಹಾಯಿಸುತ್ತೇವೆ. ಗೆಣಸು ಅವರೆಕಾಯಿ ಎಲ್ಲವನ್ನೂ ಬೇಯಿಸಿ ಹಸುಗಳಿಗೆ ನೀಡುತ್ತೇವೆ. ಎಲ್ಲಾ ವಸ್ತುಗಳ ಬೆಲೆ ಕಡಿಮೆ ಅದರೆ ಚೆನ್ನಾಗಿರುತ್ತೆ ಎಂದು ಹೇಳಿದರು.
ಎಲ್ಲ ವಸ್ತುಗಳ ಬೆಲೆ ಜಾಸ್ತಿ ಆಗಿದೆ; ಗ್ರಾಹಕಿ ಉಷಾ ಮಾತನಾಡಿ, ಹಬ್ಬ ಮಾಡಲು ಕಷ್ಟವಾಗುತ್ತದೆ. ಎಲ್ಲದರ ಬೆಲೆಯು ಜಾಸ್ತಿ ಅಗಿದೆ. ನಾವು ಬಾಳೆಹಣ್ಣು, ಸೊಪ್ಪಿನಕಡಲೆ ಕಾಯಿ, ಹೂ, ಹಣ್ಣು, ಕಬ್ಬು, ಎಳ್ಳು-ಬೆಲ್ಲ, ಖರೀದಿ ಮಾಡಿದ್ದೇನೆ. ಈ ವರ್ಷ ಬೆಲೆಗಳಲ್ಲಿ ಹೆಚ್ಚಾದ ಕಾರಣ ಸ್ಪಲ್ಪ ಹಬ್ಬ ಮಾಡೋದು ಕಷ್ಟ ಅಗಿದೆ. ಈ ಮೊದಲು ಕಬ್ಬಿಗೆ 20 ರೂ. ಇತ್ತು. ಇವಾಗ 60 ರೂ. ಅಗಿದೆ. ಅದರೂ ಕೂಡಾ ನಮಗೆ ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಸಿಂಪಲ್ ಅಗಿ ಹಬ್ಬ ಮಾಡುತ್ತಿದ್ದೇವೆ. ಹಬ್ಬದಲ್ಲಿ ಸಿಹಿ ಮಾಡಿ ಹಸು ಕರುಗಳಿಗೆ ಪೊಜೆ ಮಾಡಿ ನಮ್ಮ ಮಕ್ಕಳ ಜೊತೆ ಸೇರಿ ಹಬ್ಬ ಅಚರಣೆ ಮಾಡುತ್ತೇವೆ ಎಂದು ತಿಳಿಸಿದರು.
ಖರೀದಿದಾರರು ಮಂಗಳಗೌರಿ ಮಾತನಾಡಿ, ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಅದರೂ ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಖರೀದಿ ಮಾಡಿ ಹಬ್ಬ ಮಾಡುತ್ತಾರೆ. ನಾನು ತರಕಾರಿ ಹೂ ಹಣ್ಣುಗಳು ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡಿದ್ದೇವೆ. ಹಬ್ಬಕ್ಕೆ ಕಿಚಿಡಿ, ಬೆಲ್ಲದ ಅನ್ನ, ಎಳ್ಳು ಬೆಲ್ಲ ಮಾಡಿ ಹಸುವಿಗೆ ಪೂಜೆ ಮಾಡುತ್ತೇವೆ. ನಮ್ಮ ಹಿಂದೂಗಳಿಗೆ ಇದು ಹೊಸ ವರ್ಷದಂತೆ, ಹೀಗಾಗಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಹಸುಗಳಿಗೆ ಪೂಜೆ ಮಾಡಿ, ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿದರು.
ಮಾರುಕಟ್ಟೆ ವ್ಯಾಪಾರಿ ಸಿದ್ದರಾಜು ಮಾತನಾಡಿ, ಹಬ್ಬದ ಖರೀದಿ ಜೋರಾಗಿದೆ. ಎಲ್ಲ ಸಿದ್ಧತೆಗಳು ಆಗುತ್ತಿದೆ, ಖುಷಿಯಾಗಿದೆ. ವಸ್ತುಗಳ ಬೆಲೆ ಸ್ವಲ್ಪ ಕಡಿಮೆ ಇದೆ. ಹಬ್ಬ ಮಾಡಲು ಬೇಕಾದ ಕೊಬ್ಬರಿ, ಎಳ್ಳು ಬೆಲ್ಲ, ಜೀರಿಗೆ ಎಲ್ಲವನ್ನೂ ತೆಗೆದುಕೊಂಡಿದ್ದೇವೆ. ಹಬ್ಬದ ವಿಶೇಷವಾಗಿ ಎಳ್ಳು ಬೀರುಲು ಸಿದ್ಧತೆ ಮಾಡಿಕೊಂಡಿದ್ದೇವೆ. ನನಗೆ ಮೂರು ಜನ ಮಕ್ಕಳಿದ್ದಾರೆ. ಅವರಿಗೆ ಹೊಸ ಬಟ್ಟೆ ತಗೆದು ಅವರ ಕೈಯಲ್ಲಿ ಎಳ್ಳು ಬೆಲ್ಲ ಬೀರಿಸಿ, ಮನೆಯಲ್ಲಿ ಸಿಹಿ ಮಾಡಿ ಹಬ್ಬವನ್ನು ಆಚರಣೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಸುಗ್ಗಿ ಹಬ್ಬಕ್ಕೆ ಸಿಲಿಕಾನ್ ಸಿಟಿ ಸನ್ನದ್ಧ: ವರ್ಷದ ಮೊದಲ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಬಲು ಜೋರು