ಚೆನ್ನೈ:"ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಆಯ್ಕೆಯಾದ ಆರಂಭದಲ್ಲಿ ನನಗೆ ಆಡಲು ಸರಿಯಾದ ಅವಕಾಶಗಳು ಸಿಗದೇ ಇದ್ದಾಗ ನನ್ನ ಬೆಂಬಲಕ್ಕೆ ನಿಂತು ಅವಕಾಶಗಳನ್ನು ನೀಡಿದ ಮಹೇಂದ್ರ ಸಿಂಗ್ ಧೋನಿಗೆ ನಾನು ಋಣಿಯಾಗಿದ್ದೇನೆ" ಎಂದು ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಿಳಿಸಿದರು.
500 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಮತ್ತು 100 ಟೆಸ್ಟ್‌ಗಳನ್ನು ಪೂರ್ಣಗೊಳಿಸಿದ ಆರ್.ಅಶ್ವಿನ್‌ಗೆ ತಮಿಳುನಾಡು ಕ್ರಿಕೆಟ್ ಸಂಸ್ಥೆಯು (ಟಿಎನ್‌ಸಿಎ) ಶನಿವಾರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ತಮ್ಮ ವೃತ್ತಿ ಬದುಕಿಗೆ ತಿರುವು ನೀಡಿದ ಪಂದ್ಯದ ಕುರಿತು ಅವರು ಮಾತನಾಡಿದರು.
"2009ರಲ್ಲಿ ನಾನು ಸಿಎಸ್‌ಕೆ ತಂಡಕ್ಕೆ ಆಯ್ಕೆಯಾದೆ. ಆದರೆ ತಂಡದಲ್ಲಿ ಲೆಜಂಡರಿ ಬೌಲರ್ ಮುತ್ತಯ್ಯ ಮುರಳೀಧರನ್ ಅವರಿದ್ದ ಕಾರಣ ನನಗೆ ಆಡಲು ಹೆಚ್ಚು ಅವಕಾಶಗಳು ಸಿಗಲಿಲ್ಲ. ಇಡೀ ಸೀಸನ್ ಬೆಂಚ್‌ಗೆ ಸೀಮಿತವಾಗಿದ್ದೆ. ಇಂತಹ ಸಮಯದಲ್ಲಿ ಬೆಂಚ್ ಕಾಯುತ್ತಿದ್ದ ನನಗೆ ತಂಡದಲ್ಲಿ ಆಡಲು ಅವಕಾಶ ನೀಡಿದ್ದು ನಾಯಕ ಎಂ.ಎಸ್.ಧೋನಿ".
"2011ರ ಋತುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಧೋನಿ, ಹೊಸ ಚೆಂಡನ್ನು ನನ್ನ ಕೈಗಿಟ್ಟು ಮೊದಲ ಓವರ್ ಬೌಲಿಂಗ್ ಮಾಡುವಂತೆ ಹೇಳಿದ್ದರು. ಈ ವೇಳೆ ನಾಲ್ಕನೇ ಎಸೆತದಲ್ಲಿ ದೈತ್ಯ ಬ್ಯಾಟರ್ ಕ್ರಿಸ್ಗೇಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದೆ. ಈಗಲೂ ಅನೇಕರು ಇದನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇದಕ್ಕೆಲ್ಲ ಧೋನಿ ಕಾರಣ. ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ. ಸರಿಯಾದ ಅವಕಾಶಗಳು ದೊರೆಯದೇ ಇದ್ದಾಗ ಅವರು ನನ್ನ ಬೆಂಬಲಕ್ಕೆ ನಿಂತರು" ಎಂದು ಅಶ್ವಿನ್ ಹಿಂದಿನ ದಿನಗಳನ್ನು ನೆನೆದರು.