ಬೆಂಗಳೂರು: ಡಬ್ಲ್ಯುಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಬೆತ್ ಮೂನಿ ಅವರನ್ನು ತಂಡದ ನಾಯಕಿಯಾಗಿ ಅದಾನಿ ಸ್ಪೋರ್ಟ್ಸ್‌ಲೈನ್ ಒಡೆತನದ ಗುಜರಾತ್ ಜೈಂಟ್ಸ್ ಘೋಷಿಸಿದೆ. ಭಾರತದ ಆಲ್‌ರೌಂಡರ್ ಸ್ನೇಹ್ ರಾಣಾ ಉಪ ನಾಯಕಿಯಾಗಿರಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೆಸರಿಸಲಾಗಿದೆ. ಡಬ್ಲ್ಯುಪಿಎಲ್‌ನ ಮೊದಲ ಆವೃತ್ತಿಯಲ್ಲಿ ಮೂನಿ ಅವರನ್ನು ಗುಜರಾತ್ ಜೈಂಟ್ಸ್‌ನ ನಾಯಕಿಯನ್ನಾಗಿ ನೇಮಿಸಲಾಗಿತ್ತು. ಆದರೆ, ಮೊದಲ ಪಂದ್ಯದ ಬಳಿಕ ಗಾಯದ ಸಮಸ್ಯೆಯಿಂದಾಗಿ ಮೂನಿ ಟೂರ್ನಿಯಿಂದ ನಿರ್ಗಮಿಸಿದ್ದರು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಮೂನಿ 2014, 2018, 2020 ಮತ್ತು 2023 ರಲ್ಲಿ T20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಜೊತೆಗೆ, 2022ರ ಏಕದಿನ ವಿಶ್ವಕಪ್ ಮತ್ತು 2022ರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. 2014ರ T20 ವಿಶ್ವಕಪ್ - ವಿಜೇತ ತಂಡದಲ್ಲಿದ್ದರೂ ಸಹ ಅವರು 2016 ಜನವರಿವರೆಗೆ ಆಸ್ಟ್ರೇಲಿಯಾ ಪರ ತಮ್ಮ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿರಲಿಲ್ಲ.
ಡಿಸೆಂಬರ್ 2017ರಲ್ಲಿ ಐಸಿಸಿಯ ವರ್ಷದ ಆರಂಭಿಕ ಆಟಗಾರ್ತಿ ಮತ್ತು ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗಳನ್ನು ಗೆದ್ದಿರುವ ಮೂನಿ, 2021 ಮತ್ತು 2022 ರಲ್ಲಿ ವಿಸ್ಡನ್‌ನ ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟರ್ ಎಂದು ಹೆಸರಿಸಲ್ಪಟ್ಟಿದ್ದಾರೆ. ಅಲ್ಲದೇ ಅತ್ಯಂತ ಕಡಿಮೆ ಅವಧಿಯಲ್ಲಿ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2,000 ರನ್‌ಗಳನ್ನು ತಲುಪಿದ ಮಹಿಳಾ ಆಟಗಾರ್ತಿ ಎಂಬ ಖ್ಯಾತಿಗೂ ಮೂನಿ ಭಾಜನರಾಗಿದ್ದಾರೆ.
ಆಫ್ ಸ್ಪಿನ್ ಬೌಲರ್ ಮತ್ತು ಬಲಗೈ ಬ್ಯಾಟರ್ ಆಗಿರುವ ಸ್ನೇಹ್ ರಾಣಾ 2014ರಲ್ಲಿ ಶ್ರೀಲಂಕಾ ವಿರುದ್ಧ ಟಿ-20 ಮಾದರಿಗೆ ಪದಾರ್ಪಣೆ ಮಾಡಿದ್ದಾರೆ. ಡಬ್ಲ್ಯುಪಿಎಲ್ ಮೊದಲ ಆವೃತ್ತಿಯಲ್ಲಿ ಮೂನಿಯವರ ಅಲಭ್ಯತೆಯಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ರಾಣಾ ಮುನ್ನಡೆಸಿ 7 ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದರು. ಹಾಗೂ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿದ್ದರು.