ಹಾವೇರಿ : ವ್ಯಕ್ತಿಯೊಬ್ಬರು ಬದುಕಿಲ್ಲವೆಂದು ತಿಳಿದು ಆಸ್ಪತ್ರೆಯಿಂದ ಊರಿಗೆ ಕರೆತರುವಾಗ ಮತ್ತೆ ಉಸಿರಾಡುವ ಮೂಲಕ ಜೀವ ಬಂದಿದೆ ಎಂದು ವರದಿಯಾಗಿತ್ತು. ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಭಾನುವಾರ ಈ ಘಟನೆಯಿಂದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪವನ್ನು ಕೋರಲಾಗಿತ್ತು. ಆಂಬ್ಯುಲೆನ್ಸ್ನಲ್ಲಿ ಕರೆತರುವಾಗ ನೆಚ್ಚಿನ ಡಾಬಾ ಬಳಿ ಕುಟುಂಬದವರು ಗೋಳಾಡಿದಾಗ ಉಸಿರಾಡಿದ್ದರು ಎಂದು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಘಟನೆ ಬಗ್ಗೆ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ಆಗಿದ್ದೇನು ? ಜಿಲ್ಲೆಯ ಬಂಕಾಪುರದ ಬಿಷ್ಟಪ್ಪ (45) ಬದುಕುಳಿದವರು. ಇವರು ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದಾಗಿ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್ನಲ್ಲಿದ್ದ ಅವರು ಮೃತಪಟ್ಟಿದ್ದಾರೆಂದು ಭಾನುವಾರ ಬೆಳಗ್ಗೆ ಆಂಬ್ಯುಲೆನ್ಸ್ನಲ್ಲಿ ಊರಿಗೆ ಕುಟುಂಬದವರು ಕರೆದೊಯ್ಯುತ್ತಿದ್ದರು. ಈ ವೇಳೆ ಊರು ಹತ್ತಿರ ಬರುತ್ತಿದ್ದಂತೆ ಪತ್ನಿ 'ಡಾಬಾ ಬಂತು ನೋಡು ಊಟ ಮಾಡುತ್ತೀಯಾ?' ಎಂದು ಗೋಳಾಡಿ ಕಣ್ಣೀರಿಟ್ಟಾಗ ಮೃತ ವ್ಯಕ್ತಿ ಉಸಿರಾಡಿದ್ದಾರೆ ಎಂದು ವರದಿಯಾಗಿತ್ತು.
ಗಾಬರಿಯಾಗಿ ಶಿಗ್ಗಾಂವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಬಗ್ಗೆ ಕಿಮ್ಸ್ ನಿರ್ದೇಶಕ ಡಾ. ಎಸ್ ಎಫ್ ಕಮ್ಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ''ಬಿಷ್ಟಪ್ಪ ಮತ್ತು ಕುಟುಂಬಸ್ಥರು ನಿನ್ನೆ ಸಂಜೆ 4.20ಕ್ಕೆ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ನಮ್ಮ ಆಸ್ಪತ್ರೆಗೆ ಬಂದಾಗ ಬಿಷ್ಟಪ್ಪ ಅವರ ಆರೋಗ್ಯ ಸ್ಥಿತಿ ಬಹಳಷ್ಟು ಚಿಂತಾಜನಕವಾಗಿತ್ತು. ಹೀಗಾಗಿ, ನಮ್ಮ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಸಚಿನ್ ಹೊಸಕಟ್ಟಿ ನೇತೃತ್ವದ ತಂಡ ಕೂಡಲೇ ಚಿಕಿತ್ಸೆ ಮುಂದುವರೆಸಿದೆ'' ಎಂದಿದ್ದಾರೆ.
''ಸದ್ಯ ಬಿಷ್ಟಪ್ಪ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ನಾವು ಎಸ್ಡಿಎಂ ಹೆಲ್ತ್ ರಿಪೋರ್ಟ್ ಪರಿಶೀಲನೆ ನಡೆಸಿದ್ದೇವೆ. ರೋಗಿ ಸಂಬಂಧಿಗಳು "ಡಿಸ್ಚಾರ್ಜ್ ಅಗೆನೆಸ್ಟ್ ಮೆಡಿಕಲ್ ಅಡ್ವೈಸ್" ನಿಯಮ ಮೀರಿರುವುದು ಕಂಡುಬಂದಿದೆ. ಅಂದರೆ ತಜ್ಞ ವೈದ್ಯರ ಸಲಹೆಯನ್ನು ಧಿಕ್ಕರಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅದೇನೆ ಇದ್ದರೂ ಬಿಷ್ಟಪ್ಪ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ'' ಎಂದು ಮಾಹಿತಿ ನೀಡಿದ್ರು.
ಇದಕ್ಕೂ ಮುನ್ನ ಈ ಘಟನೆ ಕುರಿತಂತೆ ಬಿಷ್ಟಪ್ಪ ಅವರ ತಾಯಿ ಗಂಗಮ್ಮ ಮಾತನಾಡಿ, ''ನಿನ್ನ ಡಾಬಾ ಬಂತು, ನಿನ್ನ ಅಂಗಡಿನೂ ಬಂತು ನೋಡು ಅಂತ ಸಣ್ಣ ಮಗ ಹೇಳಿದಾಗ ಹಾ.. ಅಂತ ಅಂದಾನ. ಆಗ ತಕ್ಷಣನೇ ಉಸಿರಾಡ್ತಿದಾನೆ, ಕಣ್ಣು ಬಿಟ್ಟಾನ ಅನ್ನೋದು ಗೊತ್ತಾಗಿದೆ. ತಕ್ಷಣ ಅಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿ ಶಿಗ್ಗಾಂವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎಂದು ಘಟನೆ ಬಗ್ಗೆ ವಿವರಿಸಿದ್ದರು.
ಬಿಷ್ಟಪ್ಪನ ನಿಧನ ಸುದ್ದಿ ಬ್ಯಾನರ್, ವಾಟ್ಸಪ್ ಗ್ರೂಪನಲ್ಲಿ ಓಂ ಶಾಂತಿ ಎಂದು ಸಂಬಂಧಿಕರು ಹಾಕಿದ್ದರು. ಇದೀಗ ಬಿಷ್ಟಪ್ಪ ಚಿಕಿತ್ಸೆ ಪಡೆದು ಬೇಗನೆ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಸಹಿತ ಚೈನ್ ಹೊರ ತೆಗೆದ ಸರಕಾರಿ ವೆನ್ಲಾಕ್ ಆಸ್ಪತ್ರೆ