ಪ್ರಯಾಗ್ರಾಜ್, ಉತ್ತರಪ್ರದೇಶ: ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಪ್ರಯಾಗರಾಜ್ದ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರ ದಂಡು ದೇಶ ವಿದೇಶಗಳಿಂದ ಆಗಮಿಸುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖ ರಾಜಕೀಯ ನಾಯಕರುಗಳು ಕೂಡ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಆಗಮಿಸಿ ಪವಿತ್ರ ಸ್ನಾನ ನಡೆಸಿದ್ದಾರೆ.
ಇಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಗಂಗಾ - ಯಮುನಾ - ಸರಸ್ವತಿ ನದಿ ಸೇರುವ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು, ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಉತ್ತರ ಪ್ರದೇಶ ರಾಜ್ಯಪಾಲರಾದ ಅನಂದಿಬೇನ್ ಪಾಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಬೆಳಗ್ಗೆ ರಾಷ್ಟ್ರಪತಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಅವರು ಇದೆ ವೇಳೆ, ಅಲ್ಲಿದ್ದ ಪಕ್ಷಿಗಳಿಗೂ ಕಾಳುಗಳನ್ನು ನೀಡಿದ್ದು ಕಂಡು ಬಂದಿತು.
ಉತ್ತರಾಖಂಡ್ ಸಿಎಂರಿಂದಲೂ ಪವಿತ್ರ ಸ್ನಾನ: ಈ ನಡುವೆ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ಅವರ ಕುಟುಂಬದೊಂದಿಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ರೀತಿಯ ಅದ್ಬುತ ಅವಕಾಶ ಲಭ್ಯವಾಗಿರುವುದಕ್ಕೆ ಕೃತಜ್ಞತೆ ಹೊಂದಿರುವುದಾಗಿ ತಿಳಿಸಿದರು. 2027ರಲ್ಲಿ ಹರಿದ್ವಾರದಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ತಯಾರಿ ನಡೆಸುವುದಾಗಿ ತಿಳಿಸಿದರು.
ಜಗತ್ತಿನ ಎಲ್ಲ ಮೂಲೆಯಿಂದ ಜನರು ಇಲ್ಲಿ ಪವಿತ್ರ ಸ್ನಾನಕ್ಕೆ ಆಗಮಿಸುತ್ತಿದ್ದಾರೆ. ಇಂದು ನಾನು ಇಲ್ಲಿರುವುದು ಅದೃಷ್ಟವೇ ಸರಿ. 2027ರಲ್ಲಿ ಹರಿದ್ವಾರದಲ್ಲಿ ಕುಂಭ ಮೇಳ ನಡೆಯಲಿದ್ದು, ಈಗಾಗಲೇ ನಾವು ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.
420 ಮಿಲಿಯನ್ ಭಕ್ತರಿಂದ ಸ್ನಾನ: ಭಾನುವಾರ ಒಂದೇ ದಿನದಂದು 8.429 ಮಿಲಿಯನ್ ಭಕ್ತರು ಪವಿತ್ರ ಸ್ನಾನ ನೆರವೇರಿಸಿದ್ದಾರೆ. ಮಹಾಕುಂಭ ಆರಂಭವಾದಾಗಿನಿಂದ ಇಲ್ಲಿಯವರೆಗೆ 420 ಮಿಲಿಯನ್ ಭಕ್ತರು ಪವಿತ್ರ ಸ್ನಾನ ನಡೆಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಜನವರಿ 13ರ ಪುಷ್ಯ ಪೂರ್ಣಿಮೆಯಿಂದ ಆರಂಭವಾಗಿರುವ ಮಹಾಕುಂಭ ಮೇಳೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯವಾಗಿದ್ದು, ಎಲ್ಲೆಡೆಯಿಂದ ಜನರನ್ನು ಆಕರ್ಷಿಸುತ್ತಿದೆ. ಈ ಮಹಾ ಕುಂಭಮೇಳ ಫೆ 26ರಂದು ಮುಕ್ತಾಯವಾಗಲಿದೆ.
ಇದನ್ನೂ ಓದಿ: ಮಹಾಕುಂಭದ ಎಫೆಕ್ಟ್: ವಾರಾಣಸಿಯಲ್ಲಿ ನಿತ್ಯ 8-10 ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನ; ತುಂಬಿ ತುಳುಕುತ್ತಿದೆ ಕಾಶಿ
ಇದನ್ನೂ ಓದಿ: ಮಹಾಕುಂಭ ವೈಭವ: ಪ್ರಯಾಗರಾಜ್ಗೆ ಭಕ್ತರ ಪ್ರವಾಹ, ಟ್ರಾಪಿಕ್ ಜಾಮ್ - ರೈಲು ನಿಲ್ದಾಣವೇ ಬಂದ್