ಜೋಳದ ರೊಟ್ಟಿ ಹೀಗೆ ಸಿದ್ಧಪಡಿಸಿ ಗಂಟೆಗಟ್ಟಲೆ ಇಟ್ಟರೂ ಸೂಪರ್ ಸಾಫ್ಟ್ ಆಗಿರುತ್ತೆ: ಆರೋಗ್ಯಕ್ಕೂ ಹಲವು ಲಾಭಗಳು - HOW TO MAKE SOFT JOWAR ROTI
How to Make Soft Jowar Roti: ಜೋಳ ರೊಟ್ಟಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ. ಮನೆಯಲ್ಲಿ ಈ ರೀತಿಯಾಗಿ ತಯಾರಿಸಿ ಗಂಟೆಗಟ್ಟಲೆ ಇಟ್ಟರೂ ಕೂಡ ರೊಟ್ಟಿಗಳು ಸೂಪರ್ ಸಾಫ್ಟ್ ಆಗಿರುತ್ತವೆ.
How to Make Soft Jowar Roti:ಜೋಳದ ರೊಟ್ಟಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತದೆ. ಇದರಿಂದ ಜೋಳದ ರೊಟ್ಟಿ ಹೆಚ್ಚು ಬೇಡಿಕೆಯಿದೆ. ಕೆಲವರು ಜೋಳದ ರೊಟ್ಟಿಗಳನ್ನು ಮನೆಯಲ್ಲೇ ಮಾಡಿದರೆ, ಇನ್ನು ಕೆಲವು ಜನರು ಹೊರಗಡೆ ಖರೀದಿಸಿ ತಂದು ಸೇವನೆ ಮಾಡುತ್ತಾರೆ. ಏಕೆಂದರೆ ಅವರಿಗೆ ಮನೆಯಲ್ಲಿ ತಯಾರಿಸಲು ಸಮಯದ ಕೊರತೆ ಇರುತ್ತದೆ.
ಹೊರಗೆ ಲಭ್ಯವಿರುವ ಜೋಳದ ರೊಟ್ಟಿಗಳಲ್ಲಿ ಅಕ್ಕಿ ಹಿಟ್ಟು ಬೆರೆಸಬಹುದು. ಇದರಿಂದ ಶುದ್ಧ ಜೋಳ ರೊಟ್ಟಿ ಬಯಸುವವರು ಮನೆಯಲ್ಲಿಯೇ ತಯಾರಿಸುವುದು ಒಳ್ಳೆಯದು. ಕೆಲವರು ಮನೆಯಲ್ಲಿ ಜೋಳದ ರೊಟ್ಟಿ ಮಾಡಿದರೂ ಅವು ಸರಿಯಾಗಿ ಬರುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ಈ ರೊಟ್ಟಿಗಳು ತುಂಬಾ ಗಟ್ಟಿಯಾಗುತ್ತವೆ. ಇದರಿಂದ ಅವರು ಜೋಳದ ರೊಟ್ಟಿಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ. ನಿಮಗಾಗಿ ನಾವು ಮೃದುವಾಗಿ ಜೋಳದ ರೊಟ್ಟಿ ಮಾಡುವುದು ಹೇಗೆ? ಅದಕ್ಕಾಗಿ ಯಾವ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
ಜೋಳದ ರೊಟ್ಟಿಗೆ ಅಗತ್ಯವಿರುವ ಪದಾರ್ಥಗಳೇನು?:
ಜೊಳದ ಹಿಟ್ಟು - 1 ಕಪ್
ನೀರು - ಮುಕ್ಕಾಲು ಕಪ್
ಉಪ್ಪು - ರುಚಿಗೆ ಬೇಕಾಗುವಷ್ಟು
ಜೋಳದ ರೊಟ್ಟಿ ತಯಾರಿಸುವ ವಿಧಾನ:
ಮೊದಲು ಒಲೆ ಆನ್ ಮಾಡಿ ಅದರ ಮೇಲೆ ಒಂದು ಪಾತ್ರೆ ಇಡಿ. ಅದರಲ್ಲಿ ನೀರು ಸುರಿಯಿರಿ ಹಾಗೂ ನೀರನ್ನು ಸರಿಯಾಗಿ ಕುದಿಸಿ. ಅದರೊಳಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕಾಗುತ್ತದೆ.
ನೀರು ಚೆನ್ನಾಗಿ ಕುದಿಯುತ್ತಿರುವಾಗ ಒಲೆ ಆಫ್ ಮಾಡಿ. ಒಂದು ಕಪ್ ಜೋಳ ಹಿಟ್ಟಿನೊಳಗೆ ಆ ನೀರನ್ನು ಸೇರಿಸಿ. ಇಲ್ಲಿ ಮುಖ್ಯವಾಗಿ ಒಂದು ವಿಷಯವನ್ನು ನೆನಪಿಡಬೇಕಾಗುತ್ತದೆ. ಹಿಟ್ಟಿನಂತೆಯೇ ನೀರನ್ನು ಅದೇ ಕಪ್‌ನಲ್ಲಿ ಅಳೆಯಬೇಕಾಗುತ್ತದೆ. ನೀವು ಒಂದು ಕಪ್ ಹಿಟ್ಟು ಹೆಚ್ಚು ಸೇರಿಸಿದರೂ ಪರವಾಗಿಲ್ಲ.
ಹಿಟ್ಟನ್ನು ನೀರಿನಲ್ಲಿ ಚೆನ್ನಾಗಿ ನಾದಿಕೊಳ್ಳಬೇಕಾಗುತ್ತದೆ. ಹಿಟ್ಟು ಕಲಸಿಕೊಳ್ಳಲು ಒಂದು ಚಮಚವನ್ನು ಬಳಕೆ ಮಾಡಬಹುದು. ಹೀಗೆ ಮಾಡುವುದರಿಂದ ಬಿಸಿಯಾದ ನೀರು ಕೈಗೆ ತಾಕುವುದಿಲ್ಲ. ಸ್ವಲ್ವ ತಣ್ಣಗಾದ ನಂತರ ಕೈಯಿಂದ ಕಲಸಿಕೊಳ್ಳಬೇಕಾಗುತ್ತದೆ.
ಹಿಟ್ಟು ಇನ್ನೂ ಸ್ವಲ್ಪ ಬೆಚ್ಚಗಿರುವಾಗಲೇ ಅದನ್ನು ಅಗಲವಾದ ತಟ್ಟೆಯಲ್ಲಿ ತೆಗೆದು ಪೇಸ್ಟ್ ರೀತಿ ಮಿಶ್ರಣ ಮಾಡಬೇಕಾಗುತ್ತದೆ. ಹಿಟ್ಟು ತುಂಬಾ ಜಿಗುಟಾಗಿದ್ದರೆ ಸ್ವಲ್ಪ ಜೋಳದ ಹಿಟ್ಟು ಸೇರಿಸಿ. ಇಲ್ಲದಿದ್ದರೆ, ಹಿಟ್ಟು ಗಟ್ಟಿಯಾಗಿದ್ದರೆ, ನಿಮ್ಮ ಕೈಗಳಿಂದ ಸ್ವಲ್ಪ ತೇವಗೊಳಿಸಿ ಹಾಗೂ ಹಿಟ್ಟನ್ನು ಬೆರೆಸಿಕೊಳ್ಳಿ. ಬಿಸಿಯಾಗಿರುವಾಗ ಹಿಟ್ಟು ಸೇರಿಸುವುದರಿಂದ ರೊಟ್ಟಿಗಳು ಮೃದುವಾಗಿ ಬರುತ್ತವೆ.
ಜೋಳದ ಹಿಟ್ಟಿನಲ್ಲಿ ಗ್ಲುಟನ್ ಇರುವುದಿಲ್ಲ. ಹಾಗಾಗಿ ನೀವು ಹಿಟ್ಟನ್ನು ಹೆಚ್ಚು ಹೊತ್ತು ಬೆರೆಸಿದರೆ, ಅದು ಹೆಚ್ಚು ಅಂಟು ರೂಪಿಸುತ್ತದೆ. ಆದ್ದರಿಂದ, ಹಿಟ್ಟನ್ನು ಸುಮಾರು 10 ನಿಮಿಷಗಳ ಕಾಲ ಬೆರೆಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದರಿಂದ ರೊಟ್ಟಿಗಳು ಮೃದುವಾಗಿ ಬರುತ್ತವೆ ಹಾಗೂ ಮುರಿಯುವುದಿಲ್ಲ.
ಈಗ ಜೋಳದ ಹಿಟ್ಟನ್ನು ಸಮಾನ ಭಾಗದ ಉಂಡೆಗಳಾಗಿ ವಿಂಗಡಿಸಿ. ಚಪಾತಿ ಮಣೆಯ ಮೇಲೆ ಒಣ ಜೋಳದ ಹಿಟ್ಟನ್ನು ಸಿಂಪಡಿಸಿ. ಹಿಟ್ಟಿನ ಮೇಲೆ ಒಂದು ಉಂಡೆಯನ್ನು ಇರಿಸಿ, ಅದರ ಮೇಲೆ ಸ್ವಲ್ಪ ಹಿಟ್ಟು ಸಿಂಪಡಿಸಿ ನಿಧಾನವಾಗಿ ರೋಲ್ ಮಾಡಿ. ಈ ಹಿಟ್ಟನ್ನು ಚಪಾತಿಯಂತೆ ಸಿದ್ಧಪಡಿಸಿದರೆ ಒಡೆಯುತ್ತದೆ. ಆದ್ದರಿಂದ ನಿಧಾನವಾಗಿ ಮಾಡಿ ರೋಲ್ ಮಾಡಬೇಕಾಗುತ್ತದೆ.
ಇದೀಗ ಒಲೆ ಆನ್ ಮಾಡಿ ಅದರ ಮೇಲೆ ತವಾ ಇಟ್ಟು ಬಿಸಿ ಮಾಡಬೇಕಾಗುತ್ತದೆ. ತವಾ ತುಂಬಾ ಬಿಸಿಯಾದಾಗ ಅದರ ಮೇಲೆ ರೊಟ್ಟಿ ಹಾಕಿ ಅರ್ಧ ನಿಮಿಷ ಬಿಡಿ. ಆ ರೊಟ್ಟಿಯ ಮೇಲೆ ನಂತರ ಚಿಕ್ಕದಾದ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದಕ್ಕೆ ಹಚ್ಚಬೇಕಾಗುತ್ತದೆ. ಮತ್ತೆ ಒಂದೂವರೆ ನಿಮಿಷದ ಬಳಿಕ ರೊಟ್ಟಿಯನ್ನು ತಿರುಗಿಸಿ ಹಾಗೂ ನಿಧಾನವಾಗಿ ಎರಡೂ ಬದಿಗಳನ್ನು ಬೇಯಿಸಬೇಕಾಗುತ್ತದೆ.
ಜೋಳದ ರೊಟ್ಟಿಯನ್ನು ಬೇಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಬೇಗ ಬೇಯಿಸಿದರೆ ರೊಟ್ಟಿ ಕಪ್ಪಗಾಗುತ್ತದೆ. ಆದರೆ, ಒಳಗಿನ ಹಿಟ್ಟು ಬೇಯುವುದಿಲ್ಲ. ಆದ್ದರಿಂದ, ರೊಟ್ಟಿಯನ್ನು ನಿಧಾನವಾಗಿ ಬೇಯಿಸಬೇಕು. ಈ ರೊಟ್ಟಿಗಳನ್ನು ಸರಿಯಾಗಿ ಬೇಯಿಸಿದರೆ ಅವು ಉಬ್ಬುತ್ತವೆ. ಬೇಯಿಸಿದ ಬಳಿಕ ಇವುಗಳನ್ನು ಹಾಟ್ ಬಾಕ್ಸ್ನಲ್ಲಿ ಇಡಿ.
ನೀವು ಹೀಗೆ ಮಾಡಿದರೆ ಸಾಕು ರೊಟ್ಟಿ ಎಷ್ಟೇ ಸಮಯ ತೆಗೆದುಕೊಂಡರೂ ತುಂಬಾ ಮೃದುವಾಗಿರುತ್ತದೆ. ಈ ರೊಟ್ಟಿಗಳನ್ನು ಯಾವುದೇ ಪಲ್ಯದೊಂದಿಗೆ ಬಿಸಿಯಾಗಿರುವಾಗಲೇ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ. ಜೋಳದ ರೊಟ್ಟಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಜೋಳದ ರೊಟ್ಟಿಯ ಆರೋಗ್ಯದ ಲಾಭಗಳೇನು?
ಜೋಳದ ರೊಟ್ಟಿ ದೇಹದ ಆರೋಗ್ಯವನ್ನು (Jowar Roti Health Benefits) ಉತ್ತೇಜಿಸುವ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ.
ಜೋಳ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಫಿನಾಲಿಕ್ ಸಂಯುಕ್ತಗಳನ್ನು ಒಳಗೊಂಡಿದೆ. ಮುಖ್ಯವಾಗಿ ಬೇರೆ ಧಾನ್ಯಗಳಿಗೆ ಹೋಲಿಸಿದರೆ, ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಜೋಳದಲ್ಲಿ ವಿಟಮಿನ್ ಬಿ1, ಬಿ2, ಬಿ3, ಖನಿಜಾಂಶಗಳು, ನಾರಿನಂಶ ಹಾಗೂ ಪ್ರೊಟೀನ್ಗಳು ಹೇರಳವಾಗಿವೆ. ಇವೆಲ್ಲಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಜೋಳದ ನಾರಿನಂಶವು ಸ್ನಾಯುಗಳನ್ನು ಸದೃಢಗೊಳಿಸುತ್ತದೆ. ಪೋಷಕಾಂಶಗಳು ಚರ್ಮವನ್ನು ಆರೋಗ್ಯವಾಗಿರಿಸುತ್ತವೆ. ಜೋಳದ ರೊಟ್ಟಿಯಲ್ಲಿ ಕಬ್ಬಿನಾಂಶವು ಹೇರಳವಾಗಿದೆ.
ಜೋಳದ ರೊಟ್ಟಿಯಲ್ಲಿ ಫಾಸ್ಫರಸ್, ಕ್ಯಾಲ್ಸಿಯಂನಂತಹ ಖನಿಜಗಳಿದ್ದು, ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಗೋಧಿಗೆ ಹೋಲಿಸಿದರೆ ಜೋಳವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಧಾನ್ಯ. ಮಧುಮೇಹದಿಂದ ಬಳಲುತ್ತಿರುವವರು ಜೋಳದ ರೊಟ್ಟಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ಜೋಳದ ರೊಟ್ಟಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ರೊಟ್ಟಿಯಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಎರಡು ರೊಟ್ಟಿ ಸೇವಿಸಿದರೆ ಹೊಟ್ಟೆ ತುಂಬಿದ ಭಾವ ಲಭಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ರೊಟ್ಟಿ ಉತ್ತಮ ಫಲಿತಾಂಶ ನೀಡುತ್ತದೆ.
ಆ್ಯಂಟಿಆಕ್ಸಿಡೆಂಟ್, ಫೈಟೊಕೆಮಿಕಲ್ಸ್ ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು ಸಹಾಯವಾಗುತ್ತದೆ.
ಜೋಳದ ರೊಟ್ಟಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಹೃದ್ರೋಗದ ಅಪಾಯ ಕಡಿಮೆ ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.