Soft Chapati Recipe: ಅನೇಕ ಜನರು ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಚಪಾತಿಗಳನ್ನು ಸೇವಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಮನೆಯಲ್ಲಿ ತಯಾರಿಸಿದ ಚಪಾತಿ ಬೆರಳುಗಳಿಂದ ಹರಿದುಕೊಂಡು ತಿನ್ನುವಷ್ಟು ತುಂಬಾ ಮೃದುವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ.
ಆದ್ರೆ, ನೀವು ಎಷ್ಟೇ ಪ್ರಯತ್ನಿಸಿದರೂ ಚಪಾತಿಗಳು ಯಾವಾಗಲೂ ಗಟ್ಟಿಯಾಗಿ ಬರುತ್ತವೆ. ಚಪಾತಿ ಹಿಟ್ಟನ್ನು ಬೆರೆಸುವುದರಿಂದ ಹಿಡಿದು ಚಪಾತಿ ಬೇಯಿಸುವವರೆಗೆ ಕೆಲವು ಟಿಪ್ಸ್ ಪಾಲಿಸಿದರೆ ಅವುಗಳನ್ನು ತುಂಬಾ ಮೃದುವಾಗಿ ತಯಾರಿಸಬಹುದು ಎಂದು ಅಡುಗೆ ತಜ್ಞರು ತಿಳಿಸುತ್ತಾರೆ. ಹೆಚ್ಚಿನ ಜನರು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಗೋಧಿ ಹಿಟ್ಟಿನಿಂದ ಚಪಾತಿ ಮಾಡುತ್ತಾರೆ.

ಆದರೆ, ಈ ಚಪಾತಿಗಳನ್ನು ಮೃದುವಾಗಿ ಬರಬೇಕಾದರೆ ನೀವು ಶುದ್ಧವಾದ ಗೋಧಿ ಹಿಟ್ಟನ್ನು ಬಳಸಬೇಕು. ಮುಖ್ಯವಾಗಿ ನೀವು ಗೋಧಿಯನ್ನು ಖರೀದಿಸಿ ಗಿರಣಿಯಲ್ಲಿ ಪುಡಿ ಮಾಡಿಸಬೇಕು. ಸಾಧ್ಯವಾಗದಿದ್ದರೆ ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಗೋಧಿ ಹಿಟ್ಟಿನ ಪ್ಯಾಕೆಟ್‌ಗಳನ್ನು ಖರೀದಿಸುವುದು ಉತ್ತಮ.

ಮೃದುವಾದ ಚಪಾತಿಗೆ ಇಲ್ಲಿವೆ ಟಿಪ್ಸ್:
- ಚಪಾತಿಗಳು ಮೃದುವಾಗಲು ಮೊದಲು ಒಂದು ಬಟ್ಟಲಿನಲ್ಲಿ ಮಾಗಿದ (ಹಣ್ಣಾದ) ಬಾಳೆಹಣ್ಣನ್ನು ನಿಮ್ಮ ಕೈಗಳಿಂದ ಹಿಸುಕಬೇಕಾಗುತ್ತದೆ. ಚಪಾತಿ ಹಿಟ್ಟಿಗೆ ಬಾಳೆಹಣ್ಣಿನ ತಿರುಳನ್ನು ಸೇರಿಸುವುದರಿಂದ ಚಪಾತಿಗಳು ತುಂಬಾ ಸೂಪರ್ ಸಾಫ್ಟ್ ಆಗಿರುತ್ತವೆ.
- ನೀವು ಸಾಣಿಸಿರುವ ಚಪಾತಿ ಹಿಟ್ಟನ್ನು ಒಂದು ಬಟ್ಟಲಿಗೆ ತೆಗೆದುಕೊಳ್ಳಿ. ಇದಕ್ಕೆ ಬಾಳೆಹಣ್ಣಿನ ತಿರುಳನ್ನು ಸೇರಿಸಿ ಮತ್ತು ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
- ಚಪಾತಿ ಹಿಟ್ಟಿನ್ನು ಬೆರೆಸಿದ ಬಳಿಕ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ. ಅದರೊಳಗೆ ಬೇಕಿದ್ದರೆ ಮತ್ತಷ್ಟು ಹಿಟ್ಟನ್ನು ಬೆರೆಸಿಕೊಳ್ಳಿ.
- ಒಂದೇ ಬಾರಿಗೆ ಹೆಚ್ಚು ನೀರು ಸೇರಿಸುವುದರಿಂದ ಚಪಾತಿ ಹಿಟ್ಟು ಮೃದುವಾಗುವುದಿಲ್ಲ.
- ಚಪಾತಿ ಹಿಟ್ಟನ್ನು ಸರಿಯಾಗಿ ನಾದಿಕೊಂಡ ನಂತರ ಅದನ್ನು ಒದ್ದೆಯಾದ ಬಟ್ಟೆಯಿಂದ ಮುಚ್ಚಿ 10 ನಿಮಿಷಗಳ ಕಾಲ ಹಾಗೆ ಬಿಡಬೇಕಾಗುತ್ತದೆ.

- ಚಪಾತಿ ಮಾಡುವ ಮೊದಲು ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಬೇಕು, ಅದಕ್ಕೆ ಸ್ವಲ್ಪ ಎಣ್ಣೆ ಸೇರಿಸಿ.
- ಚಪಾತಿ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಳ್ಳಬೇಕಾಗುತ್ತದೆ.
- ಈಗ ಚಪಾತಿ ಮಣೆಯ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಸಿಂಪಡಿಸಿ ಅದರ ಮೇಲೆ ಹಿಟ್ಟಿನ ಉಂಡೆ ಮಾಡಿಕೊಂಡು ಚಪಾತಿ ಲತ್ತುಗುಣಿಯಿಂದ ಚಪಾತಿ ರೆಡಿ ಮಾಡಬೇಕಾಗುತ್ತದೆ.
- ಬಳಿಕ ಸ್ವಲ್ಪ ಎಣ್ಣೆ ಎಲ್ಲಾ ಕಡೆ ಹಚ್ಚಿ ಚಪಾತಿಯನ್ನು ಮಧ್ಯದಲ್ಲಿ ಮಡಿಸಿ. ಇದರ ಮೇಲೂ ಸ್ವಲ್ಪ ಎಣ್ಣೆ ಸಿಂಪಡಿಸಿ. ನಂತರ ಚಪಾತಿಯನ್ನು ಇನ್ನೊಂದು ಬದಿಯಲ್ಲಿ ಮಡಿಸಿ. ಚಪಾತಿಯನ್ನು ಎಲ್ಲಾ ಬದಿಗಳಲ್ಲಿ ತ್ರಿಕೋನಾಕಾರವಾಗಿ ಮಡಿಸಿ.
- ಎಲ್ಲಾ ಚಪಾತಿ ಉಂಡೆಗಳನ್ನು ಇದೇ ಆಕಾರದಲ್ಲಿ ಮಡಿಸಿ ಇಡಬೇಕು.
- ಈಗ ಚಪಾತಿ ಮಣೆಯ ಮೇಲೆ ತ್ರಿಕೋನಾಕಾರದ ಚಪಾತಿ ಪೀಸ್ನ್ನು ಇರಿಸಿ ತೀಡಿಕೊಳ್ಳಬೇಕಾಗುತ್ತದೆ.
- ನೀವು ಚಪಾತಿಯನ್ನು ತೆಳುವಾಗಿ ಹಾಗೂ ದಪ್ಪವಾಗಿ ಅಲ್ಲದೇ ಮಧ್ಯಮವಾಗಿ ಮಾಡಬೇಕಾಗುತ್ತದೆ.
- ರೆಡಿಯಾದ ಚಪಾತಿಯನ್ನು ಬಿಸಿಯಾದ ಪ್ಯಾನ್ ಮೇಲೆ ಇರಿಸಿ ಅರ್ಧ ನಿಮಿಷ ಹಾಗೆಯೇ ಬಿಡಿ.

- ಈಗ ಚಪಾತಿಯನ್ನು ಒಂದು ಬದಿಗೆ ತಿರುಗಿಸಿ ಸ್ವಲ್ಪ ಎಣ್ಣೆ ಹಾಕಿ. ನಂತರ ಅಂಚುಗಳಿಗೆ ಎಣ್ಣೆ ಹಚ್ಚಿ ಬೇಯಿಸಬೇಕಾಗುತ್ತದೆ.
- ನೀವು ಒಲೆಯ ಉರಿಯನ್ನು ಹೆಚ್ಚು ಇಟ್ಟು, ಹಾಗೆ ಚಪಾತಿಯನ್ನು ತಿರುಗಿಸುತ್ತಾ ಸಂಪೂರ್ಣವಾಗಿ ಬೇಯಿಸಬೇಕಾಗುತ್ತದೆ. ಇದರಿಂದ ಚಪಾತಿಗಳು ಮೃದುವಾಗುತ್ತವೆ.
- ಚಪಾತಿಗಳನ್ನು ಕಡಿಮೆ ಉರಿಯಲ್ಲಿ ಬೇಯಿಸಿದರೆ ಅವು ಒಣಗಿ ಗಟ್ಟಿಯಾಗುತ್ತವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
- ಈ ಸಲಹೆಗಳನ್ನು ಅನುಸರಿಸಿ ಚಪಾತಿಗಳನ್ನು ಮಾಡಿದರೆ, ನೀವು ಎಷ್ಟೇ ಗಂಟೆ ಹಾಗೆ ಇಟ್ಟರೂ ಅವುಗಳು ತುಂಬಾ ಸಾಫ್ಟ್ ಆಗಿರುತ್ತವೆ.
- ನೀವು ಯಾವುದೇ ಮಾಂಸಾಹಾರಿ ಅಥವಾ ಸಸ್ಯಾಹಾರಿ ಪಲ್ಯದೊಂದಿಗೆ ಈ ಚಪಾತಿಗಳನ್ನು ಸೇವಿಸಬಹುದು.
- ಈ ಟಿಪ್ಸ್ ನಿಮಗೆ ಇಷ್ಟವಾದರೆ ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ ನೋಡಿ.
