ಬೆಂಗಳೂರು : ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಬಹುತೇಕ ಆರೋಪಿಗಳು ಇಂದು ನಗರದ 57ನೇ ಸಿಸಿಹೆಚ್ ನ್ಯಾಯಾಲಯದ ಎದುರು ಹಾಜರಾಗಿದ್ದಾರೆ.
ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಕೆಲ ಆರೋಪಿಗಳು ಜಾಮೀನು ಪಡೆದಿದ್ದು, ಪ್ರತೀ ತಿಂಗಳು ನ್ಯಾಯಾಲಯದ ಎದುರು ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಹುತೇಕ ಎಲ್ಲರೂ ನ್ಯಾಯಾಲಯದ ಎದುರು ಹಾಜರಾದರು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ.
ಆರೋಪಿಗಳಿಗೆ ಮಾಫಿ ಸಾಕ್ಷಿಯಾಗುವಂತೆ ಬೆದರಿಕೆ : ಪ್ರಕರಣದ ಕೆಲವು ಆರೋಪಿಗಳಿಗೆ ಮಾಫಿ ಸಾಕ್ಷಿಯಾಗುವಂತೆ ಬೆದರಿಸಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿರುವುದಾಗಿ ದರ್ಶನ್ ಅವರ ಪರ ವಕೀಲ ಸುನೀಲ್ ತಿಳಿಸಿದರು. ಕೆಲವು ಆರೋಪಿಗಳಿಗೆ ಪೊಲೀಸರು, ವಕೀಲರ ಹೆಸರಿನಲ್ಲಿ ಸಂಪರ್ಕಿಸಿ ಮಾಫಿ ಸಾಕ್ಷಿಯಾಗುವಂತೆ ಬೆದರಿಸಲಾಗುತ್ತಿದೆ. ಅದರ ಕುರಿತು ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಮತ್ತು ಸಂಬಂಧಿಸಿದಂತೆ ಅರ್ಜಿಯನ್ನೂ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ಪುಣ್ಯಕಾರ್ಯ: ದಾಸನ ಹೃದಯಪೂರ್ವಕ ನಮನ
ಕೊಲೆ ಪ್ರಕರಣದ ಹಿನ್ನೆಲೆ : 2024ರ ಜೂನ್ ತಿಂಗಳಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಮೃತದೇಹ ಪತ್ತೆಯಾಯ್ತು. ಜೂನ್ 9ರಂದು 33 ವರ್ಷದ ವ್ಯಕ್ತಿಯ ಶವ ಸಿಕ್ಕ ಬೆನ್ನಲ್ಲೇ ಪೊಲೀಸ್ ತನಿಖೆ ಪ್ರಾರಂಭವಾಯ್ತು. ಜೂನ್ 8ರಂದು ಕೊಲೆ ನಡೆದಿದ್ದು, ಜೂನ್ 11ರಂದು ನಟ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ದರ್ಶನ್ ತಂಡದ ಮೇಲಿದೆ. ದರ್ಶನ್ ಗೆಳತಿ ಎನ್ನಲಾದ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅವರು ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನೆಲೆ ಈ ಘಟನೆ ನಡೆದಿದೆ ಎಂಬ ಆರೋಪ ಇದೆ. ಮರ್ಡರ್ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ 17 ಮಂದಿ ಅರೆಸ್ಟ್ ಆಗಿದ್ದರು.
ಇದನ್ನೂ ಓದಿ: ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ದರ್ಶನ್ ತಾಯಿ
ದರ್ಶನ್ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದ್ರೆ ಅವರ ರಿಲ್ಯಾಕ್ಸ್ ಮೂಡ್ ಫೋಟೋ ವೈರಲ್ ಆದ ಬಳಿಕ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ತನಿಖೆ ಸಾಗಿ 100ಕ್ಕೂ ಹೆಚ್ಚು ದಿನಗಳ ಕಾಲ ದರ್ಶನ್ ಸೆರೆವಾಸ ಅನುಭವಿಸಿದರು. ನಂತರ ವೈದ್ಯಕೀಯ ಕಾರಣಗಳ ಹಿನ್ನೆಲೆ 2024ರ ಅಕ್ಟೋಬರ್ 30ರಂದು ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ಡಿಸೆಂಬರ್‌ನಲ್ಲಿ ರೆಗ್ಯುಲರ್ ಬೇಲ್ ಸಿಕ್ಕಿತ್ತು. ಪ್ರಕರಣದ ತನಿಖೆ ಸಾಗಿದ್ದು, ಆರೋಪಿಗಳು ಸೂಚಿಸಿದ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.