ಮೈಸೂರು: "ಮುಡಾ ಪ್ರಕರಣದ ಆರೋಪಿಗಳಾದ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬಸ್ಥರ ವಿರುದ್ಧ ತನಿಖೆ ನಡೆಸಿರುವ ಮೈಸೂರು ಲೋಕಾಯುಕ್ತ ಪೊಲೀಸರು, ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯನ್ನು ಪಡೆದುಕೊಂಡಿದ್ದು, ಕೂಲಂಕಷವಾಗಿ ಪರಿಶೀಲನೆ ನಡೆಸಿ ಮಾರ್ಚ್ 7ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ತನಿಖಾ ವರದಿ ತಿರಸ್ಕರಿಸುವಂತೆ ಕೋರಿ ಅರ್ಜಿ ಸಲ್ಲಿಸುತ್ತೇನೆ" ಎಂದು ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಿನ್ನೆ (ಸೋಮವಾರ) ನ್ಯಾಯಾಲಯಕ್ಕೆ ಹೋಗಿ, ಲೋಕಾಯುಕ್ತರು ಮುಡಾ ಪ್ರಕರಣದ ಸಂಬಂಧ ಸಲ್ಲಿಸಿರುವ ತನಿಖಾ ವರದಿಯ ಪ್ರತಿ ನೀಡುವಂತೆ ಮನವಿ ಮಾಡಿದ್ದೆ. ನಿನ್ನೆ ಲೋಕಾಯುಕ್ತರು ಅಂತಿಮ ವರದಿಯ ಕೆಲ ಪ್ರತಿಗಳನ್ನು ಮಾತ್ರ ನೀಡಿದ್ದು, ಮಾರ್ಚ್ 1ರ ಒಳಗೆ ಸಂಪೂರ್ಣ ತನಿಖಾ ವರದಿಯ ಪ್ರತಿ ನೀಡುವುದಾಗಿ ತಿಳಿಸಿದ್ದಾರೆ" ಎಂದರು.
"ಲೋಕಾಯುಕ್ತ ತನಿಖಾ ವರದಿಯಲ್ಲಿ ಅಧಿಕಾರಿಗಳ ತಪ್ಪಿನ ಬಗ್ಗೆ ಮಾತ್ರ ಉಲ್ಲೇಖಿಸಿದ್ದು, ಪ್ರಭಾವಿ ರಾಜಕಾರಣಿಗಳನ್ನು ರಕ್ಷಣೆ ಮಾಡುವ ರೀತಿ ವರದಿ ನೀಡಿದ್ದಾರೆ. ಈ ಬಗ್ಗೆ ನಾನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮಾರ್ಚ್ 7ರಂದು ತಕರಾರು ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಮಾಡಿದ್ದೇನೆ. ಅಂದು ನಾನು ಲೋಕಾಯುಕ್ತ ವರದಿಯನ್ನು ತಿರಸ್ಕರಿಸಿ ಮತ್ತೆ ತನಿಖೆಗೆ ಆದೇಶಿಸುವಂತೆ ಮನವಿ ಮಾಡುತ್ತೇನೆ. ಮುಡಾ ಮಾಜಿ ಆಯುಕ್ತ ನಟೇಶ್ ಬಗ್ಗೆ ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಜಾರಿ ನಿದೇರ್ಶನಾಲಯಕ್ಕೆ (ಇ.ಡಿ) ಅವರ ವಿರುದ್ಧ ಮತ್ತೊಂದು ಮನವಿ ಪತ್ರ ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಮುಡಾ: ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಸಿಎಂ ಹೇಳಿದ್ದೇನು?
ಇದನ್ನೂ ಓದಿ: ಮುಡಾ: ಸಿಎಂ ಸೇರಿ ನಾಲ್ವರ ವಿರುದ್ಧ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿದ ಲೋಕಾಯುಕ್ತ