ನವದೆಹಲಿ: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರ ರೂಪಿಸಿದ್ದ 'ಮದ್ಯ ನೀತಿ' ಕುರಿತ ಸಿಎಜಿ ವರದಿಯನ್ನು ನೂತನ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಇಂದು(ಮಂಗಳವಾರ) ಮಂಡಿಸಿತು. 2021-2022ರ ಹೊಸ ಅಬಕಾರಿ ನೀತಿಯಿಂದಾಗಿ ದೆಹಲಿ ಸರ್ಕಾರಕ್ಕೆ 2 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಅಂಶ ಅದರಲ್ಲಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಆಪ್ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತಾದ 14 ಸಿಎಜಿ ವರದಿಗಳನ್ನು ಮಂಡಿಸಲಾಗುವುದು ಎಂದು ಬಿಜೆಪಿ ಹೇಳಿತ್ತು. ಅದರಲ್ಲಿ ಮೊದಲ ವರದಿಯನ್ನು ವಿಶೇಷ ಅಧಿವೇಶನದ ಮೊದಲ ದಿನವೇ ಮಂಡಿಸಿದೆ.
ಸಿಎಜಿ ವರದಿಯ ಅಂಶಗಳಿವು:
- ಹಿಂದಿನ ಆಪ್ ಸರ್ಕಾರದ ಹೊಸ ಅಬಕಾರಿ ನೀತಿಯು ದುರ್ಬಲವಾಗಿತ್ತು. ಮದ್ಯ ಸರಬರಾಜಿಗೆ ನೀಡುವ ಪರವಾನಗಿಯಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈಗ ರದ್ದಾಗಿರುವ ಅಬಕಾರಿ ನೀತಿ ಪರಿಷ್ಕರಣೆ ಮಾಡಲು ತಜ್ಞರ ಸಮಿತಿಯ ಶಿಫಾರಸುಗಳನ್ನು ಅಂದಿನ ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ನಿರಾಕರಿಸಿದ್ದರು.
- ಚುನಾವಣೆಗೆ ಮುನ್ನ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮದ್ಯ ಹಗರಣದ ವರದಿಯು, ಅಸ್ತಿತ್ವದಲ್ಲಿ ಇಲ್ಲದ ಪುರಸಭೆಯ ವಾರ್ಡ್‌ಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯಲಾಗಿಲ್ಲ. ಇದರಿಂದ ಬೊಕ್ಕಸಕ್ಕೆ 941.53 ಕೋಟಿ ರೂಪಾಯಿಗಳ ಆದಾಯ ಖೋತಾ ಆಗಿದೆ.
- ದೆಹಲಿಯ ಹಲವು ಪ್ರದೇಶಗಳಲ್ಲಿ ಆರಂಭಿಸಲಾದ ಮದ್ಯದಂಗಡಿಗಳಿಗೆ ಮಾನದಂಡ ಪಾಲಿಸಲಾಗಿಲ್ಲ. ಇದರಿಂದ ಪರವಾನಗಿ ಶುಲ್ಕ, ಮರುಟೆಂಡರ್ನಿಂದ ಬರುವ ಆದಾಯ ಸೇರಿ ಅಬಕಾರಿ ಇಲಾಖೆಗೆ ಸುಮಾರು 890.15 ಕೋಟಿ ರೂ.ಗಳ ನಷ್ಟವಾಗಿದೆ.
ಕೋಟ್ಯಂತರ ರೂಪಾಯಿ ಮನ್ನಾ:
- ಕೋವಿಡ್ ಸಾಂಕ್ರಾಮಿಕದ ವೇಳೆ ಮದ್ಯದಂಗಡಿಗಳು ಬಂದ್ ಆಗಿದ್ದರಿಂದ ವ್ಯವಹಾರ ನಷ್ಟಕ್ಕೆ ಪರವಾನಗಿದಾರರು ಸರ್ಕಾರಕ್ಕೆ ನೀಡಬೇಕಾಗಿದ್ದ ಹಣವನ್ನು ಬೇಕಾಬಿಟ್ಟಿ ಮನ್ನಾ ಮಾಡಲಾಗಿದೆ. ಇದರಿಂದ 144 ಕೋಟಿ ರೂ.ಗಳಷ್ಟು ಆದಾಯ ನಷ್ಟವಾಗಿದೆ.
- ಮಾಸ್ಟರ್ ಪ್ಲಾನ್ ದೆಹಲಿ-2021 ನಿಯಮಗಳ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದಂಗಡಿ ತೆರೆಯಲು ನಿಷೇಧವಿದೆ. ಆದರೆ, ಆಪ್ನ ಅಬಕಾರಿ ನೀತಿಯು ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಎರಡು ಮಳಿಗೆಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿತ್ತು. ಒಂದು ಅಂಗಡಿ ಇದ್ದಲ್ಲಿ ಅದೇ ಪ್ರದೇಶದಲ್ಲಿ ಇನ್ನೊಂದು ಮಳಿಗೆ ಆರಂಭಿಸಲು ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಆದರೆ, ಇದನ್ನು ಪಾಲಿಸಲಾಗಿಲ್ಲ.
- ನಿಯಮಬಾಹಿರವಾಗಿ ಎಲ್ಲೆಂದರಲ್ಲಿ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಸೂಚಿಸಿತು. ಇದರಿಂದ 67 ಕಡೆಗಳಲ್ಲಿ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಮಳಿಗೆ ಆರಂಭಕ್ಕೆ ನೀಡಬೇಕಿರುವ ಪರವಾನಗಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಿತು. ಸರ್ಕಾರದ ಲೋಪದಿಂದಾಗಿ ತಿಂಗಳಿಗೆ 114.50 ಕೋಟಿ ಪರವಾನಗಿ ಶುಲ್ಕ ನಷ್ಟವಾಯಿತು. ಈ ವಿನಾಯಿತಿಯಿಂದಾಗಿ ಸುಮಾರು 941.53 ಕೋಟಿ ರೂ.ಗಳ ಖೋತಾ ಆಗಿದೆ.
ಅವಧಿಗೂ ಮೊದಲೇ ಪರವಾನಗಿ ವಾಪಸ್:
- 2022ರಲ್ಲಿ ಮದ್ಯದಂಗಡಿಗಳಿಗೆ ನೀಡಿದ ಪರವಾನಗಿಯನ್ನು 19 ಕಡೆ ಅವಧಿಗೂ ಮೊದಲೇ ಸರ್ಕಾರಕ್ಕೆ ವಾಪಸ್ ನೀಡಲಾಗಿದೆ. ಇವನ್ನು ಆರಂಭಿಸಲು ಸರ್ಕಾರ ಮರು ಟೆಂಡರ್ ಕರೆದಿಲ್ಲ. ಇದರಿಂದ ಪರವಾನಗಿ ಶುಲ್ಕ ಮತ್ತು ಚಿಲ್ಲರೆ ಮಾರಾಟ ಸ್ಥಗಿತದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದಿದೆ.
- ಪರವಾನಗಿದಾರರಿಂದ ಭದ್ರತಾ ಠೇವಣಿಗಳನ್ನು ತಪ್ಪಾಗಿ ಸಂಗ್ರಹಿಸಿದ್ದರಿಂದಲೂ 27 ಕೋಟಿ ರೂಪಾಯಿ ನಷ್ಟವಾಗಿದೆ. ಆಗಿನ ಉಪ ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ನೇತೃತ್ವದ ಸಚಿವರ ಸಮಿತಿ (GoM) ಅಬಕಾರಿ ನೀತಿಯ ಕುರಿತು ರಚಿಸಲಾದ ತಜ್ಞರ ಸಮಿತಿಯ ಶಿಫಾರಸುಗಳನ್ನೂ ಪರಿಗಣಿಸಿಲ್ಲ. ಕೋವಿಡ್ ವೇಳೆ ಪರವಾನಗಿ ಶುಲ್ಕ ಮನ್ನಾ ಮಾಡಿದ್ದರಿಂದಲೂ ಭಾರೀ ನಷ್ಟವಾಗಿದೆ.
- ದುರ್ಬಲ ನೀತಿ, ಅನುಷ್ಠಾನದ ಕೊರತೆಯಿಂದಾಗಿ ದೆಹಲಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಸುಮಾರು 2,002.68 ಕೋಟಿಗಳ ಸಂಚಿತ ನಷ್ಟ ಸಂಭವಿಸಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಆಪ್ ನಾಯಕರ ಜೈಲುವಾಸ: ಅಬಕಾರಿ ನೀತಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿದ ಬಳಿಕ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಪ್ರಕರಣದ ತನಿಖೆಯಲ್ಲಿ ಸಿಬಿಐಗೆ ವಹಿಸಿದರು. ತನಿಖಾ ಸಂಸ್ಥೆಗಳು ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಆಪ್ನ ಹಲವು ನಾಯಕರನ್ನು ತಪ್ಪಿತಸ್ಥರು ಎಂದು ಗುರುತಿಸಿ ಜೈಲಿಗೆ ಕಳುಹಿಸಿತ್ತು.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಹೊಸ ಮದ್ಯ ನೀತಿ: ಕಡಿಮೆ ಆಲ್ಕೋಹಾಲ್‌ಯುಕ್ತ ಬಾರ್‌ಗಳನ್ನು ತೆರೆಯಲು ನಿರ್ಧಾರ
ದೆಹಲಿ ಮದ್ಯ ನೀತಿ ಹಗರಣವೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ