ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ನಡೆಸುತ್ತಿರುವ 2023-24ನೇ ಸಾಲಿನ ಗ್ರೂಪ್ ಎ ಮತ್ತು ಬಿ ವೃಂದದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಹೊರಡಿಸಿದ್ದ ಅಧಿಸೂಚನೆ ಅಮಾನತಿನಲ್ಲಿದ್ದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಮಾರ್ಪಾಡು ಮಾಡಿದ್ದು, ಮುಖ್ಯ ಪರೀಕ್ಷೆಗೆ ಅರ್ಜಿ ತುಂಬಲು ಅವಕಾಶ ಮಾಡಿಕೊಟ್ಟಿದೆ.
ಆದರೆ, ಅರ್ಜಿ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ತಿಳಿಸಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಪವಿತ್ರಾ ಮತ್ತು ಮತ್ತಿತರ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಾಂಗ ಸದಸ್ಯ ಎಸ್.ವೈ.ವಟವಟಿ ಅವರು ಈ ಆದೇಶ ನೀಡಿದರು.
ವಿಚಾರಣೆ ವೇಳೆ ಕೆಪಿಎಸ್ಸಿ ಪರ ವಕೀಲರು, ಪ್ರಶ್ನೆ ಪತ್ರಿಕೆ ಭಾಷಾಂತರ ಗೊಂದಲಗಳಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಎಲ್ಲ ಪ್ರಶ್ನೆಗಳನ್ನು ಪರಿಶೀಲಿಸಿ ಕೆಲವು ಪ್ರಶ್ನೆಗಳಿಗೆ ಕೃಪಾಂಕ ನೀಡಲು ಸಲಹೆ ನೀಡಿತ್ತು. ಅದರಂತೆ ಕೀ ಉತ್ತರಗಳನ್ನು ಪರಿಷ್ಕರಿಸಿ ತಪ್ಪಾಗಿದ್ದ ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಅರ್ಜಿದಾರರು ಮರು ಪರೀಕ್ಷೆ ಮಾಡುವಂತೆ ಕೋರಿದ್ದಾರೆ. ಆದರೆ, ತಜ್ಞರ ಸಮಿತಿ ಶಿಫಾರಸಿನಂತೆ ಕೃಪಾಂಕ ನೀಡಿದ್ದು, ಮರುಪರೀಕ್ಷೆ ನಡೆಸಬೇಕೆಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಜೊತೆಗೆ, ಮುಖ್ಯ ಪರೀಕ್ಷೆ ನಡೆಸಲು ಆಯೋಗ ಜನವರಿ 29ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ತಡೆಯಾಜ್ಞೆ ಇರುವುದರಿಂದ ನೇಮಕ ಪ್ರಕ್ರಿಯೆ ವಿಳಂಬವಾಗುತ್ತದೆ. ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಸುದೀರ್ಘ ವಾದ ಮಂಡಿಸಲು ಕೆಪಿಎಸ್ಸಿ ಸಿದ್ದವಿದೆ. ಹೀಗಾಗಿ ತಡೆಯಾಜ್ಞೆ ತೆರವು ಮಾಡಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಆದರೆ, ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿತು.
ಈ ಆದೇಶದಿಂದಾಗಿ ಪೂರ್ವಭಾವಿ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ (1:15ರಂತೆ) ಮುಖ್ಯ ಪರೀಕ್ಷೆಗೆ ಅರ್ಜಿಯ ಮುಂದಿನ ಭಾಗವನ್ನು ಭರ್ತಿ ಮಾಡಲು ಅವಕಾಶ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ: ಕಳೆದ ಆ.27ರಂದು ಕೆಪಿಎಸ್ಸಿ 384 ಕೆಎಎಸ್ ಹುದ್ದೆಗಳ ನೇಮಕಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. 2.10 ಲಕ್ಷ ಅರ್ಜಿ ಸಲ್ಲಿಸಿದ್ದವರ ಪೈಕಿ 1.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆ ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ದೊಡ್ಡ ಲೋಪಗಳು ಉಂಟಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸುವಂತೆ ಅಭ್ಯರ್ಥಿಗಳು ಆಯೋಗದ ಮೇಲೆ ಒತ್ತಡ ಹಾಕಿದ್ದರು. ಕೊನೆಗೆ ಸರ್ಕಾರ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸುವಂತೆ ಆಯೋಗಕ್ಕೆ ಸೂಚಿಸಿತ್ತು.
ಅದರಂತೆ ಆಯೋಗ ಡಿ.29ರಂದು 553 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. 2.10 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. 1.05 ಲಕ್ಷ (ಶೇ.47.7) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪರೀಕ್ಷೆಯಲ್ಲೂ ಸುಮಾರು 59 ಪ್ರಶ್ನೆಗಳ ಅನುವಾದದಲ್ಲಿ ದೋಷಗಳಾಗಿವೆ. ಹಾಗಾಗಿ, ಪರೀಕ್ಷೆ ರದ್ದುಗೊಳಿಸಬೇಕು ಎಂದು ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು.
ಈ ಮಧ್ಯೆ, ಕೆಪಿಎಸ್ಸಿ ಮೂರು ಬಾರಿ ಕೀ ಉತ್ತರಗಳನ್ನು ಬಿಡುಗಡೆ ಮಾಡಿದ್ದಲ್ಲದೆ, ಪ್ರಶ್ನೆಗಳಿಗೆ ನೀಡಿದ್ದ ಉತ್ತರದಲ್ಲಿಯೇ ಲೋಪಗಳಾಗಿದ್ದರಿಂದ ಅಭ್ಯರ್ಥಿಗಳಿಗೆ 5 ಕೃಪಾಂಕಗಳನ್ನು ನೀಡುವುದಾಗಿ ಪ್ರಕಟಿಸಿತ್ತು. ಆ ನಂತರ ಆಯೋಗ ಫೆ.10ರಂದು ಪೂರ್ವಭಾವಿ ಪರೀಕ್ಷಾ ಫಲಿತಾಂಶ ಪ್ರಕಟಿಸಿ, 1:15ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿತ್ತು.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆಯ ಕನ್ನಡ ತರ್ಜುಮೆಯಲ್ಲಿ ಗೊಂದಲ: ಕೆಪಿಎಸ್‌ಸಿ ವಿರುದ್ಧ ಕರವೇ ಪ್ರತಿಭಟನೆ - PROTEST AGAINST KPSC