Kidney Failure Symptoms: ದೇಹಕ್ಕೆ ಪ್ರತಿಯೊಂದು ಭಾಗವೂ ತುಂಬಾ ಮುಖ್ಯವಾಗಿದೆ. ನಮ್ಮ ಕೈಮುಷ್ಟಿ ಗಾತ್ರದಷ್ಟಿರುವ ಕಿಡ್ನಿಗಳು ನಿರ್ದಿಷ್ಟವಾಗಿ ಅನೇಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಿಡ್ನಿ ಮಾನವ ದೇಹದಲ್ಲಿರುವ ಬಹಳ ಮುಖ್ಯವಾದ ಅಂಗವಾಗಿದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಕಿಡ್ನಿಗಳು ಆರೋಗ್ಯಕರವಾಗಿರುವುದು ಮುಖ್ಯವಾಗಿದೆ. ವ್ಯಕ್ತಿಯ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ, ಈ ಸ್ಥಿತಿಯನ್ನು ಮೂತ್ರಪಿಂಡ ವೈಫಲ್ಯ ಅಥವಾ ಯುರೇಮಿಯಾ ಎಂದು ಹೇಳಲಾಗುತ್ತದೆ. ಈ ಸ್ಥಿತಿಯಲ್ಲಿ ದೇಹದಲ್ಲಿ ಹೆಚ್ಚುವರಿ ನೀರು ಹಾಗೂ ತ್ಯಾಜ್ಯ ವಸ್ತುಗಳು ಸಂಗ್ರಹವಾಗುತ್ತವೆ, ಇದರಿಂದಾಗಿ ಆ ವ್ಯಕ್ತಿ ಮೃತಪಡುತ್ತಾನೆ.
ಕಿಡ್ನಿ ಕಾಯಿಲೆ ಅನುವಂಶಿಕವಾಗಿದ್ದರೆ ಅಪಾಯಕಾರಿ: ಒಬ್ಬ ವ್ಯಕ್ತಿಗೆ ಕಿಡ್ನಿ ಕಾಯಿಲೆ ಬಂದ ನಂತರ ದೇಹದ ಸ್ಥಿತಿ ಕ್ರಮೇಣ ಹದಗೆಡುತ್ತದೆ. ಇದರಿಂದ ಕ್ರಿಯಾತ್ಮಕ ಸಾಮರ್ಥ್ಯ ನಷ್ಟವಾಗುತ್ತದೆ. ಮೂತ್ರಪಿಂಡದ ಕಾಯಿಲೆಯ ಅನುವಂಶಿಕ ಇಲ್ಲವೇ ಕುಟುಂಬದ ಇತಿಹಾಸ ಹೊಂದಿರುವ ಜನರಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ತೊಂದರೆಗಳು ವಿಶೇಷವಾಗಿ ಸಾಮಾನ್ಯವಾಗಿದೆ. ಕಡಿಮೆ ತೂಕದ ಶಿಶು ಜನನ, ದೀರ್ಘಕಾಲೀನ ಔಷಧಗಳು, ತೀವ್ರ ಮೂತ್ರನಾಳದ ಸೋಂಕುಗಳು, ಬೊಜ್ಜುತನ, ಕಿಡ್ನಿ ಸ್ಟೋನ್ಗಳು ಇವೆಲ್ಲವೂ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗುತ್ತದೆ.
ಕಿಡ್ನಿ ವೈಫಲ್ಯಕ್ಕೆ ಕಾರಣಗಳೇನು?:
ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ನೀಡಲು ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡಬಹುದು. ಆದರೆ, ಡಯಾಲಿಸಿಸ್‌ನಲ್ಲಿರುವ ಕೆಲವರು ಕೇವಲ 30 ವರ್ಷ ಅಥವಾ ಅದಕ್ಕಿಂತ ಕಡಿಮೆ ಕಾಲ ಬದುಕುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕಿಡ್ನಿ ವೈಫಲ್ಯವನ್ನು ತಪ್ಪಿಸಲು ಸರಿಯಾದ ಆಹಾರವನ್ನು ತೆಗೆದುಕೊಳ್ಳುವುದು ಹಾಗೂ ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾರೆ. ಇದೆಲ್ಲವೂ ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ಮೂತ್ರಪಿಂಡದ ಸೋಂಕು ಉಂಟಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ನಿಮ್ಮ ಕಿಡ್ನಿ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ತಿಳಿಯಬಹುದು?

ಕಿಡ್ನಿ ಶುದ್ಧೀಕರಣಕಾರಕದಂತೆ ಕಾರ್ಯ ಮಾಡುತ್ತೆ: ಮಾನವ ದೇಹದಲ್ಲಿ ಮೂತ್ರಪಿಂಡವು ಶುದ್ಧೀಕರಣಕಾರಕದಂತೆ ಕಾರ್ಯನಿರ್ವಹಿಸುತ್ತದೆ. ಈ ಪರಿಸ್ಥಿತಿಯಲ್ಲಿ ಮೂತ್ರಪಿಂಡ ವೈಫಲ್ಯ ಸಂಭವಿಸಿದಲ್ಲಿ ಇಡೀ ದೇಹದ ಮೇಲೆ ಪರಿಣಾಮ ಬೀರಬಹುದು. ವಾಸ್ತವವಾಗಿ ಮೂತ್ರ ವ್ಯವಸ್ಥೆ ಹಾಗೂ ಮೂತ್ರನಾಳವು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. ಮೂತ್ರಪಿಂಡಗಳು ರಕ್ತದಿಂದ ತ್ಯಾಜ್ಯ ವಸ್ತುಗಳು ಮತ್ತು ಹೆಚ್ಚುವರಿ ನೀರನ್ನು ಶೋಧಿಸಿ ಮೂತ್ರವನ್ನು ಉತ್ಪಾದಿಸುತ್ತವೆ.
ದೇಹವನ್ನು ಆರೋಗ್ಯವಾಗಿಡಲು ಮೂತ್ರ ವ್ಯವಸ್ಥೆಯು ಬಹಳ ಮುಖ್ಯ. ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ತ್ಯಾಜ್ಯ ವಸ್ತುಗಳು ಹಾಗೂ ಹೆಚ್ಚುವರಿ ನೀರು ಸಂಗ್ರಹವಾಗಬಹುದು. ಇದು ಹೃದಯರಕ್ತನಾಳ ವ್ಯವಸ್ಥೆಯಂತಹ ಇತರ ವ್ಯವಸ್ಥೆಗಳನ್ನು ಹಾನಿಗೊಳಿಸುತ್ತದೆ ಹಾಗೂ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಕೇವಲ ನೀರು ಕುಡಿಯುವುದು ಸಾಕಾಗುವುದಿಲ್ಲ. ಕಿಡ್ನಿ ವೈಫಲ್ಯವು ಜೀವಕ್ಕೆ ಅಪಾಯಕಾರಿಯಾಗುತ್ತದೆ.

ದೇಹದಲ್ಲಿ ಉಂಟಾಗುತ್ತೆ ಹಲವು ಸಮಸ್ಯೆಗಳು: ನ್ಯಾಷನಲ್ ಕಿಡ್ನಿ ಫೌಂಡೇಷನ್ ಪ್ರಕಾರ, ಬೆಳಗ್ಗೆ ವಾಕರಿಕೆ, ಆಗಾಗ್ಗೆ ವಾಂತಿ, ಮೂತ್ರದಲ್ಲಿ ರಕ್ತ, ತೀವ್ರ ಬೆನ್ನು ನೋವು, ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವು ಕಂಡು ಬಂದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದಲ್ಲದೆ ತಲೆತಿರುಗುವಿಕೆ, ಕಣ್ಣುಗಳು ಮತ್ತು ಪಾದಗಳ ಸುತ್ತ ಊತ ಕೂಡ ಮೂತ್ರಪಿಂಡದ ಸಮಸ್ಯೆ ಪ್ರಾರಂಭವಾಗುವ ಮೊದಲು ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳಾಗಿವೆ.
ಕಿಡ್ನಿ ವೈಫಲ್ಯದ ಆರಂಭಿಕ ಲಕ್ಷಣಗಳೇನು?
- ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ
- ಮೂತ್ರದ ಬಣ್ಣದಲ್ಲಿ ಬದಲಾವಣೆ ಅಥವಾ ಮೂತ್ರದಲ್ಲಿ ನೊರೆ ಇಲ್ಲವೇ ಗುಳ್ಳೆಗಳು ಕಾಣಿಸುತ್ತದೆ.
- ಕೈಗಳು, ಪಾದಗಳು ಮತ್ತು ಕಾಲುಗಳಲ್ಲಿ ಊತ ಮತ್ತು ನೋವು
- ಗಮನಕೇಂದ್ರೀಕರಿಸುವಲ್ಲಿ ತೊಂದರೆ
- ನಿದ್ರೆಯ ಕೊರತೆ ಉಂಟಾಗುವುದು
- ಹೆಚ್ಚು ದಣಿದ ಹಾಗೂ ತುಂಬಾ ಸುಸ್ತಾದ ಭಾವನೆ
- ಉಸಿರಾಟದ ತೊಂದರೆ
- ಹಸಿವಿನ ಕೊರತೆ, ಏನನ್ನೂ ತಿನ್ನಲು ಇಚ್ಛೆ ಇಲ್ಲದಿರುವುದು.
- ಚರ್ಮದ ಮೇಲೆ ತುರಿಕೆ ಇಲ್ಲವೇ ದದ್ದುಗಳು
- ಹಠಾತ್ ತೂಕ ನಷ್ಟ ಅಥವಾ ಹೆಚ್ಚಳ
ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ತೆಗೆದುಹಾಕಲು ಸಾಧ್ಯವಾಗದಿದ್ದಾಗ, ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗುತ್ತವೆ. ಇದು ಕಾಲುಗಳಲ್ಲಿ ಮತ್ತು ಕಣ್ಣುಗಳ ಸುತ್ತಲೂ ಊತವನ್ನು ಉಂಟುಮಾಡುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅಧಿಕ ರಕ್ತದೊತ್ತಡದ ಸಮಸ್ಯೆ ಉದ್ಭವಿಸುತ್ತದೆ.
ಮೂತ್ರ ವಿಸರ್ಜಿಸುವಾಗ ಸ್ವಲ್ಪ ನೊರೆ ಬರುವುದು ಸಹಜ. ಆದರೆ, ಅತಿಯಾದ ನೊರೆ ಬರುವುದು ನಿಮ್ಮ ಮೂತ್ರಪಿಂಡಗಳು ಹಾನಿಗೊಳಗಾಗುತ್ತಿವೆ ಎಂಬುದರ ಸಂಕೇತವಾಗಿದೆ. ಮೂತ್ರ ವಿಸರ್ಜಿಸುವಾಗ ಸ್ವಲ್ಪ ನೊರೆ ಬರುವುದು ಕಡಿಮೆ ಪ್ರೋಟೀನ್ ಸೂಚ್ಯಂಕದ ಕಾರಣವಾಗುತ್ತದೆ. ಗಾಢ ಬಣ್ಣದ ಮೂತ್ರ ಅಪಾಯಕಾರಿ. ಇದು ಮೂತ್ರಪಿಂಡಗಳಿಗೆ ಗಂಭೀರ ಹಾನಿ ಮತ್ತು ಮೂತ್ರದಲ್ಲಿ ರಕ್ತದ ಸೋರಿಕೆಯ ಸಂಕೇತವಾಗಿದೆ. ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಸಾಮಾನ್ಯವಾಗಿದೆ. ಆದರೆ, ಇದು ಪದೇ ಪದೇ ಸಂಭವಿಸಿದರೆ ಅದು ಆರಂಭಿಕ ಮೂತ್ರಪಿಂಡ ಹಾನಿಯ ಸಂಕೇತವಾಗಿದೆ.
ರಕ್ತದಲ್ಲಿನ ವಿಷಕಾರಿ ವಸ್ತುಗಳ ಮಟ್ಟ ಹೆಚ್ಚಾಗುವುದರಿಂದ ಮೂತ್ರಪಿಂಡ ವೈಫಲ್ಯ ಸಂಭವಿಸಬಹುದು. ಇದು ಕೆಲವು ದಿನಗಳವರೆಗೆ ವಾಂತಿ ಮಾಡಲು ಕಾರಣವಾಗುತ್ತದೆ. ಮೂತ್ರದಲ್ಲಿ ರಕ್ತಸ್ರಾವವಾಗುವುದು ಕೂಡ ಒಳ್ಳೆಯದಲ್ಲ. ಏಕೆಂದರೆ, ಇದು ಸೋಂಕು ಅಥವಾ ಕಿಡ್ನಿ ಸ್ಟೋನ್ಗಳಂತಹ ಮೂತ್ರಪಿಂಡದ ಕಾಯಿಲೆಯ ಲಕ್ಷಣವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
- https://www.niddk.nih.gov/health-information/kidney-disease/kidney-failure/what-is-kidney-failure
- https://www.niddk.nih.gov/health-information/kidney-disease/kidneys-how-they-work
- https://www.kidney.org/news-stories/10-signs-you-may-have-kidney-disease
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.