ತುಮಕೂರು: ಶಿಶು ಮಾರಾಟ ಆರೋಪ ಸಂಬಂಧ ತಂದೆ-ತಾಯಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕುಣಿಗಲ್ ನಗರದಲ್ಲಿ ನಡೆದಿದೆ. ಮಗುವಿನ ತಾಯಿ ಮೋನಿಷಾ (21), ತಂದೆ ಶ್ರೀನಂದ (24), ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಮಗುವನ್ನು ಖರೀದಿಸಿದ್ದ ಮುಬಾರಕ್ ಪಾಷ ಮತ್ತು ಮಗುವಿನ ತಂದೆಯ ಸ್ನೇಹಿತೆ ಜ್ಯೋತಿ ಬಂಧಿತರು.
ರಾಮನಗರ ಜಿಲ್ಲೆ ಮಾಗಡಿ ಮೂಲದ ಶ್ರೀನಂದ ಮತ್ತು ಮೋನಿಷಾ ಇಬ್ಬರು ಅವಿವಾಹಿತರಾಗಿದ್ದರು. ಫೆಬ್ರವರಿ 20ರಂದು ಮೋನಿಷಾಗೆ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಇನ್ನೂ ಮದುವೆಯಾಗದ ಕಾರಣ ಮಗುವನ್ನು, ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಜ್ಯೋತಿ ಎಂಬವರ ಮೂಲಕ ಕೊತ್ತಗೆರೆ ಗ್ರಾಮದ ಮುಬಾರಕ್ ಪಾಷ ಎಂಬವರಿಗೆ 60 ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತು. ಘಟನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಯಿಂದ ದೂರು ದಾಖಲಿಸಿಕೊಂಡ ಕುಣಿಗಲ್ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, "ಮಾಗಡಿ ಮೂಲದ ಮೋನಿಷಾ ಎಂಬವರು ಫೆಬ್ರವರಿ 20ರಂದು ಕುಣಿಗಲ್ ತಾಲೂಕು ಆಸ್ಪತ್ರೆಗೆ ಹೊಟ್ಟೆನೊವು ಎಂದು ದಾಖಲಾಗಿದ್ದರು. ಅದೇ ದಿನ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ನಂತರ ಫೆ.22ರಂದು ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಎಂಬವರ ಮೂಲಕ ಮಗುವನ್ನು ಮಾರಾಟ ಮಾಡಿದ್ದಾರೆ. 60 ಸಾವಿರ ರೂ. ಹಣವನ್ನು ಅಂಗನವಾಡಿ ಕಾರ್ಯಕರ್ತೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ" ಎಂದು ತಿಳಿಸಿದರು.
"ಈ ವಿಚಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಗೊತ್ತಾದ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯರೆಲ್ಲಾ ಅಲ್ಲಿಗೆ ಹೋಗಿ, ಮಗುವನ್ನು ರಕ್ಷಣೆ ಮಾಡಿ ತುಮಕೂರಿನ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಮಗುವಿನ ತಾಯಿ, ತಂದೆ ಹಾಗೂ ಅಂಗನವಾಡಿ ಕಾರ್ಯಕರ್ತೆ, ಮಗು ಖರೀದಿಸಿದ್ದ ಮುಬಾರಕ್ ಸೇರಿದಂತೆ ಐವರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಇದರಲ್ಲಿ ಮೇಲ್ನೋಟಕ್ಕೆ ಭಾಗಿಯಾಗಿರುವುದು ಕಂಡುಬಂದಿದೆ. ಈಗಾಗಲೇ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ತನಿಖಾ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಮತ್ತೊಂದು ಮಗು ಮಾರಾಟ ಕೇಸ್ ಭೇದಿಸಿದ ಪೊಲೀಸರು : ಮೂವರು ಆರೋಪಿಗಳ ಬಂಧನ
ಇದನ್ನೂ ಓದಿ: ಹಾಸನ: ಮಗು ಮಾರಾಟ ಪ್ರಕರಣ, ತಾಯಿ ಸೇರಿ ಐವರ ಬಂಧನ