ಕರ್ನಾಟಕ

karnataka

ETV Bharat / international

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಯಾವಾಗ ಪ್ರಕಟವಾಗಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ವೈಟ್ ಹೌಸ್
ವೈಟ್ ಹೌಸ್ (IANS)

By ETV Bharat Karnataka Team

Published : Nov 5, 2024, 12:41 PM IST

ವಾಷಿಂಗ್ಟನ್: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬುಧವಾರ ಬೆಳಗ್ಗೆ ಹೊರಬೀಳುವ ಸಾಧ್ಯತೆ ಇದೆ. ಅಂದರೆ ಮಂಗಳವಾರ ಮತದಾನ ಮುಗಿದ ಕೆಲ ಗಂಟೆಗಳ ನಂತರ ಫಲಿತಾಂಶ ಸಿಗಬಹುದು. ಆದರೆ ಕೆಲವೊಮ್ಮೆ ಫಲಿತಾಂಶ ಸಿಗಲು ಕೆಲ ದಿನಗಳು ಅಥವಾ ವಾರಗಳೇ ಆಗಬಹುದು. ಹಿಂದೆ ಒಂದು ಬಾರಿ ಫಲಿತಾಂಶ ಬರಲು ಒಂದು ತಿಂಗಳಷ್ಟು ಸಮಯ ಹಿಡಿದಿತ್ತು. ಮತ್ತೊಮ್ಮೆ ಹೀಗಾಗಲ್ಲ ಎನ್ನಲು ಸಾಧ್ಯವಿಲ್ಲ.

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರವನ್ನು ಕೊನೆಗೊಳಿಸುತ್ತಿದ್ದಂತೆ ಚುನಾವಣಾ ದಿನದ ಮುನ್ನಾದಿನವಾದ ಸೋಮವಾರ ಬೆಳಿಗ್ಗೆ 78 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ ಮತದಾರರು ಅದಾಗಲೇ ತಮ್ಮ ಮತ ಚಲಾಯಿಸಿದ್ದರು.

ಗೆಲ್ಲಲು ಬೇಕಿರುವ ಮ್ಯಾಜಿಕ್‌ ನಂಬರ್‌ 270: 2016ರಲ್ಲಿ, ಮತದಾನವು ನವೆಂಬರ್ 8ರಂದು ಸಂಜೆ ಕೊನೆಗೊಂಡಿತ್ತು ಮತ್ತು ನವೆಂಬರ್ 9ರಂದು ಮುಂಜಾನೆ 2:30ರ ವೇಳೆಗೆ ಫಲಿತಾಂಶ ಸಂಪೂರ್ಣವಾಗಿ ಹೊರಬಂದಿತ್ತು. ಆವಾಗ ಟ್ರಂಪ್ ತಮ್ಮ ಪ್ರಮುಖ ರಾಜ್ಯ ವಿಸ್ಕಾನ್ಸಿನ್ ಮತ್ತು ಅದರ 10 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಗೆದ್ದು 270 ಎಲೆಕ್ಟೋರಲ್ ಕಾಲೇಜ್ ಮತಗಳ ಮ್ಯಾಜಿಕ್ ಸಂಖ್ಯೆಯನ್ನು ದಾಟಿದ್ದರು. ಈ ಮೂಲಕ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಾಗಿ ಐದು ನಿಮಿಷಗಳ ನಂತರ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು.

ಇದು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ವಿಳಂಬ ಫಲಿತಾಂಶ: ಕೆಲವೊಮ್ಮೆ ಫಲಿತಾಂಶ ಸಿಗಲು ತಡವಾಗಬಹುದು. 2020ರಲ್ಲಿ, ಮತದಾನವು ನವೆಂಬರ್ 3ರ ಸಂಜೆ ಕೊನೆಗೊಂಡಿತ್ತು. ಆದರೆ ಪೆನ್ಸಿಲ್ವೇನಿಯಾ ತನ್ನ 19 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಮತ್ತು ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ಅಧ್ಯಕ್ಷ ಜೋ ಬೈಡನ್ ನವೆಂಬರ್ 7ರವರೆಗೆ ಕಾಯಬೇಕಾಯಿತು. 2000ನೇ ಇಸವಿಯ ಚುನಾವಣೆಯಲ್ಲಿ ದೇಶವು ತನ್ನ ಮುಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರೇ ಎಂದು ತಿಳಿಯಲು ಒಂದು ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಇದು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ವಿಳಂಬದ ಫಲಿತಾಂಶವಾಗಿದೆ. ಆ ವರ್ಷ ನವೆಂಬರ್ 7ರಂದು ಮತದಾನ ಕೊನೆಗೊಂಡಿತ್ತು ಮತ್ತು ಡಿಸೆಂಬರ್ 12ರಂದು ಫಲಿತಾಂಶ ಬಂದಿತ್ತು.

ಎಲೆಕ್ಟೋರಲ್ ಕಾಲೇಜ್ ಮತಗಳೇ ಮುಖ್ಯ: ಯುಎಸ್ ಅಧ್ಯಕ್ಷೀಯ ಚುನಾವಣೆಯನ್ನು ರಾಷ್ಟ್ರೀಯ ಮತಗಳ ಒಟ್ಟು ಮೊತ್ತದಿಂದ ನಿರ್ಧರಿಸಲಾಗುವುದಿಲ್ಲ. ಬದಲಾಗಿ ಗೆದ್ದ ಎಲೆಕ್ಟೋರಲ್ ಕಾಲೇಜ್ ಮತಗಳಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಹ್ಯಾರಿಸ್ ಮತ್ತು ಟ್ರಂಪ್ ಗೆಲ್ಲಲು 538 ಎಲೆಕ್ಟೋರಲ್ ಕಾಲೇಜ್ ಮತಗಳಲ್ಲಿ ಕನಿಷ್ಠ 270 ಮತಗಳನ್ನು ಗೆಲ್ಲಬೇಕು. ಪ್ರತಿ ರಾಜ್ಯಕ್ಕೆ ಹಲವಾರು ಎಲೆಕ್ಟೋರಲ್ ಕಾಲೇಜ್ ಮತಗಳನ್ನು ನಿಗದಿಪಡಿಸಲಾಗುತ್ತದೆ. ಇದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್​ಗೆ ಕಳುಹಿಸುವ ಸದಸ್ಯರ ಸಂಖ್ಯೆಯ ಒಟ್ಟು ಮೊತ್ತವಾಗಿದೆ; ಸೆನೆಟ್ ಎಣಿಕೆಯು ಪ್ರತಿ ರಾಜ್ಯಕ್ಕೆ ಒಂದೇ ಆಗಿರುತ್ತದೆ, ತಲಾ ಎರಡು.

ಮತದಾನದ ಮುಕ್ತಾಯದ ಸಮಯವು ರಾಜ್ಯದಿಂದ ರಾಜ್ಯಕ್ಕೆ ಮತ್ತು ರಾಜ್ಯದೊಳಗಿನ ಕೌಂಟಿಯಿಂದ ಕೌಂಟಿಗೆ ಮತ್ತು ಕೆಲವೊಮ್ಮೆ ಒಂದೇ ಕೌಂಟಿಯಲ್ಲಿ ನಗರದಿಂದ ನಗರಕ್ಕೆ ಬದಲಾಗಬಹುದು.

ಇದನ್ನೂ ಓದಿ: ಖಲಿಸ್ತಾನಿಗಳ ಅಟ್ಟಹಾಸ ಖಂಡಿಸಿ ಕೆನಡಾದಲ್ಲಿ ಹಿಂದೂಗಳಿಂದ ಬೃಹತ್ ಪ್ರತಿಭಟನೆ: ಪ್ರಧಾನಿ ಮೋದಿ ಹೇಳಿದ್ದೇನು?

ABOUT THE AUTHOR

...view details