ಕೊಚ್ಚಿ,ಕೇರಳ: ಪೆರಿಯಾ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐ(ಎಂ)ನ 10 ಕಾರ್ಯಕರ್ತರಿಗೆ ಸಿಬಿಐ ನ್ಯಾಯಾಲಯ ಶುಕ್ರವಾರ ಡಬಲ್ ಜೀವಾವಧಿ ಶಿಕ್ಷೆ ಹಾಗೂ ಪಕ್ಷದ ಮಾಜಿ ಶಾಸಕ ಸೇರಿದಂತೆ ನಾಲ್ವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿ 2019ರ ಫೆಬ್ರವರಿ 17ರಂದು ಕೇರಳ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (19) ಮತ್ತು ಪಿ.ಕೆ.ಶರತ್ ಲಾಲ್ (24) ಅವರ ಬರ್ಬರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ಕಳೆದ ಶನಿವಾರ 14 ಜನರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು ಮತ್ತು 10 ಜನರನ್ನು ಖುಲಾಸೆಗೊಳಿಸಿತ್ತು.
ಆದರೆ, ನ್ಯಾಯಾಲಯದ ತೀರ್ಪನ ಬಗ್ಗೆ ಕೊಲೆಗೀಡಾದವರ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯಾಗಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಹಾಗಾಗಿಲ್ಲ. ಅಲ್ಲದೆ 10 ಆರೋಪಿಗಳು ಖುಲಾಸೆಯಾಗಿದ್ದಾರೆ. ಹೀಗಾಗಿ ಈ ಬಗ್ಗೆ ಕಾಂಗ್ರೆಸ್ನ ಉನ್ನತ ನಾಯಕರೊಂದಿಗೆ ಚರ್ಚಿಸಿ ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು" ಎಂದು ಕುಟುಂಬಸ್ಥರು ಹೇಳಿದ್ದಾರೆ.
ನ್ಯಾಯಾಲಯದ ಪ್ರಕಾರ, ಎಂಟು ಆರೋಪಿಗಳು ಅವಳಿ ಕೊಲೆಗಳಲ್ಲಿ ನೇರವಾಗಿ ಭಾಗಿಯಾಗಿದ್ದರೆ, ಇತರ ಆರು ಮಂದಿ ಪರೋಕ್ಷ ಪಾತ್ರ ವಹಿಸಿದ್ದಾರೆ. ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಎಂಟು ಮಂದಿಗೆ ನ್ಯಾಯಾಲಯ ಡಬಲ್ ಜೀವಾವಧಿ ಶಿಕ್ಷೆ ವಿಧಿಸಿದರೆ, ಪಿತೂರಿಯ ಭಾಗವಾಗಿದ್ದ ಇತರ ಇಬ್ಬರಿಗೆ ಕೂಡ ಡಬಲ್ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆಗೊಳಗಾದವರಲ್ಲಿ ಮಾಜಿ ಶಾಸಕ ಮತ್ತು ಸಿಪಿಐ - ಎಂ ಜಿಲ್ಲಾ ಮುಖಂಡ ಕೆ.ವಿ.ಕುಂಞಿರಾಮನ್ ಕೂಡ ಸೇರಿದ್ದಾರೆ. ಕುಂಞಿರಾಮನ್ ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಡಬಲ್ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 10 ಆರೋಪಿಗಳು ತಲಾ 2 ಲಕ್ಷ ರೂ., ಉಳಿದ ನಾಲ್ವರು 10,000 ರೂ.ಗಳ ದಂಡ ಪಾವತಿಸಬೇಕಿದೆ. ಈ ಮೊತ್ತವನ್ನು ಕೊಲೆಗೀಡಾದವರ ಕುಟುಂಬಗಳಿಗೆ ನೀಡಲಾಗುವುದು.
ಆರಂಭದಲ್ಲಿ ಕ್ರೈಂ ಬ್ರಾಂಚ್ ಪ್ರಕರಣದ ತನಿಖೆ ನಡೆಸಿತ್ತು. ಆದರೆ, ಮೃತರ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋದ ನಂತರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಸಿಪಿಐ - ಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ರಾಜಕೀಯ ವೈಷಮ್ಯದಿಂದ ಈ ಕೊಲೆಗಳು ನಡೆದಿವೆ ಎಂದು ಸಿಬಿಐ ತೀರ್ಮಾನಿಸಿದೆ.
ಕಾಸರಗೋಡಿನ ಪೆರಿಯಾದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರು ಅವರ ಸ್ಮಾರಕ ಸ್ಥಳದಲ್ಲಿ ಜಮಾಯಿಸಿದ್ದರು. ತೀರ್ಪನ್ನು ಕೇಳಿದ ನಂತರ ಮೃತ ಇಬ್ಬರ ಕುಟುಂಬಗಳ ಕೆಲವು ಮಹಿಳೆಯರು ಕಣ್ಣೀರು ಹಾಕುತ್ತಿರುವುದು ಕಂಡು ಬಂದಿತು.
ತೀರ್ಪಿನ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಅಪರಾಧಿಗಳಲ್ಲಿ ಮಾಜಿ ಸಿಪಿಐ-ಎಂ ಶಾಸಕ ಮತ್ತು ಕಾರ್ಯಕರ್ತರಿರುವುದು ಗಮನಾರ್ಹ ಎಂದರು. "ಈ ಅಪರಾಧದಲ್ಲಿ ತಮ್ಮ ನಾಯಕರು ಅಥವಾ ಕಾರ್ಯಕರ್ತರ ಪಾತ್ರ ಇಲ್ಲವೆಂದು ಸಿಪಿಐ-ಎಂ ಪಕ್ಷ ಹೇಳುತ್ತಿತ್ತು. ಆದರೆ ಈಗ ಅವರಿಗೆ ಶಿಕ್ಷೆಯಾಗಿದೆ. ಸಿಪಿಐ-ಎಂ ಹೀಗೆ ಕೆಲಸ ಮಾಡುತ್ತದೆ" ಎಂದು ಸತೀಶನ್ ಹೇಳಿದರು.
ಇದನ್ನೂ ಓದಿ : ಕಾಸಗಂಜ್ ಕೋಮು ಗಲಭೆ, ಕೊಲೆ ಪ್ರಕರಣ: 28 ಮಂದಿ ದೋಷಿ, ಎನ್ಐಎ ನ್ಯಾಯಾಲಯ ತೀರ್ಪು - KASGANJ COMMUNAL VIOLENCE