ಬೆಂಗಳೂರು: ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಸರ್ಕಾರದ ನಿಯೋಗವು ಬೆಂಗಳೂರಿಗೆ ಭೇಟಿ ನೀಡಿದೆ.
ಚುನಾವಣೆ ವೇಳೆ ನೀಡಿದ ಭರವಸೆಯಂತೆ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಇದರ ಅಂಗವಾಗಿ ಶಕ್ತಿ ಯೋಜನೆ ಜಾರಿ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಪಡೆಯುವ ನಿಟ್ಟಿನಲ್ಲಿ ಆಂಧ್ರದ ಗೃಹ ಸಚಿವೆ ಅನಿತಾ, ಸಾರಿಗೆ ಸಚಿವ ರಾಮಮೋಹನ್ ರೆಡ್ಡಿ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವೆ ಸಂಧ್ಯಾರಾಣಿ ಒಳಗೊಂಡಂತೆ ಅಧಿಕಾರಿಗಳ ತಂಡ ಭೇಟಿ ನೀಡಿದೆ.
ಶಕ್ತಿ ಯೋಜನೆ ಬಗ್ಗೆ ಅರಿಯಲು ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಪ್ರತಿಕ್ರಿಯೆ ಪಡೆದುಕೊಂಡಿತು. ಶಕ್ತಿ ಯೋಜನೆಯಿಂದಾಗಿ ಎಷ್ಟು ಉಪಯೋಗವಾಗಿದೆ? ಹೇಗೆ ಉಪಯೋಗವಾಗಿದೆ ಎಂಬುದರ ಪ್ರಶ್ನೆಗೆ ಮಹಿಳಾ ಪ್ರಯಾಣಿಕರೊಬ್ಬರು ಉತ್ತರಿಸಿ ಶಕ್ತಿ ಯೋಜನೆಯಿಂದಾಗಿ ನಮಗೆ ಅನುಕೂಲವಾಗಿದೆ. ಪ್ರತಿ ತಿಂಗಳು 1200 ರೂಪಾಯಿ ಬಸ್ ಪಾಸ್ಗೆ ತಗುಲಿತ್ತು.
ಇದೀಗ ಉಚಿತ ಬಸ್ ಪ್ರಯಾಣದಿಂದಾಗಿ ನಮಗೆ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬಳಿಕ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಪ್ರಧಾನ ಕಚೇರಿ ಪಕ್ಕದಲ್ಲಿರುವ ಕೆಎಸ್ಆರ್ಟಿಸಿ ಡಿಪೊ ಕರೆದುಕೊಂಡು ಸಿಬ್ಬಂದಿಯನ್ನು ಪರಿಚಯಿಸಿದರು. ಶಕ್ತಿ ಯೋಜನೆ ಜಾರಿ, ಬಸ್ಗಳ ನಿರ್ವಹಣೆ ಬಗ್ಗೆ ನಿಯೋಗ ಮಾಹಿತಿ ಪಡೆದುಕೊಂಡಿತು.
ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವೆ ಅನಿತಾ, ಕರ್ನಾಟಕದಲ್ಲಿ ಜಾರಿ ತಂದಿರುವ ಶಕ್ತಿ ಯೋಜನೆ ಉತ್ತಮವಾಗಿದೆ. ಈ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ. ಹೀಗಾಗಿ ಈ ಈ ಯೋಜನೆ ಸಮರ್ಪಕವಾಗಿ ಅರಿತು ಇಲ್ಲಿನ ಸರ್ಕಾರ ಅನುಸರಿಸಿದ ನಿಯಮಗಳನ್ನ ತಿಳಿದು ಆಂಧ್ರದಲ್ಲಿ ಜಾರಿ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಾರಿಗೆ ಬಸ್ ದರ ಪರಿಷ್ಕರಣೆಗೆ ಹುಬ್ಬಳ್ಳಿ ಮಂದಿ ಗರಂ: ಸಾರ್ವಜನಿಕರ ಅಭಿಪ್ರಾಯ ಹೀಗಿದೆ!