ಮಂಡ್ಯ: ಪಕ್ಷದೊಳಗೆ ನಡೆಯುತ್ತಿರುವ ಘಟನೆ ಬೇಸರ ತಂದಿದೆ. ಗುಂಪುಗಾರಿಕೆ, ಎರಡೂ ಬಣ ಮಾಡಿರೋದು ಒಳ್ಳೆಯದಲ್ಲ. ಇದು ಪಕ್ಷಕ್ಕೂ ಒಳ್ಳೆಯದಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಮದ್ದೂರಿನಲ್ಲಿ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರಿಂದ ಬೆಂಗಳೂರಿನಲ್ಲಿ ನಡೆದ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನು ಈ ಪಕ್ಷಕ್ಕೆ ಬಂದು 50 ವರ್ಷಗಳಾಗಿವೆ. ನನಗೆ 18 ವರ್ಷ ವಯಸ್ಸಿನಲ್ಲೇ ಪಕ್ಷಕ್ಕೆ ಬಂದವನು. ಎಮರ್ಜೆನ್ಸಿ ಸಮಯದಲ್ಲಿ ಜೈಲಿನಲ್ಲಿದ್ದೆ. ನಾನು, ಚಿಕ್ಕಪ್ಪ, ತಮ್ಮ ಎಲ್ಲರೂ ಜೈಲಿನಲ್ಲಿದ್ದೆವು. ನಾವು ಹೋರಾಟ ಮಾಡಿಕೊಂಡು ಬಂದವರು. ಒಂದೇ ಬಾರಿ ಲೀಡರ್ ಆಗಿಲ್ಲ, ಹಂತ ಹಂತವಾಗಿ ಬಂದವನು" ಎಂದು ತಿಳಿಸಿದರು.
"ಬೆಂಗಳೂರಲ್ಲಿ ಏನು ಇರಲಿಲ್ಲ. ನಾನು, ಅನಂತ್ ಕುಮಾರ್ ಪಕ್ಷ ಕಟ್ಟಿದ್ದೇವೆ. ಹಳೆ ಮೈಸೂರಿನಲ್ಲೂ ಹೋರಾಟ ಮಾಡಿದ್ದೇವೆ. ಇವಾಗ ನಡೆಯುತ್ತಿರುವ ಘಟನೆ ಬೇಸರ ತಂದಿದೆ. ಗುಂಪುಗಾರಿಕೆ, ಎರರು ಬಣಗಳನ್ನು ಮಾಡಿರೋದು ಒಳ್ಳೆಯದಲ್ಲ. ಎಲ್ಲಾ ಸರಿಯಾಗಬೇಕು. ಇದು ಪಕ್ಷಕ್ಕೂ ಒಳ್ಳೆಯದಲ್ಲ, ಜನರಿಗೂ ಒಳ್ಳೆಯದಲ್ಲ. ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡೋದು ನಮ್ಮ ಕರ್ತವ್ಯ" ಎಂದರು.
"ಸರ್ಕಾರದ ತಪ್ಪನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾದರೆ ಪಕ್ಷ ಒಗ್ಗಟ್ಟಾಗಿರಬೇಕು. ಕೇಂದ್ರದ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ. ಪಕ್ಷದಲ್ಲಿ ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ಎಲ್ಲ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಮೂರು ವರ್ಷಕ್ಕೆ ಒಂದು ಬಾರಿ ಚುನಾವಣೆ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರೇ ಬದಲಾಗುತ್ತಾರೆ. ರಾಜ್ಯಾಧ್ಯಕ್ಷರ ಬದಲಾವಣೆ ರಾಷ್ಟ್ರೀಯ ನಾಯಕರಿಗೆ ಬಿಟ್ಟದ್ದು. ಅಧ್ಯಕ್ಷರಾಗಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತೆ. ಅದನ್ನೆಲ್ಲ ಅಮಿತ್ ಶಾ ಅವರು ತೀರ್ಮಾನ ಮಾಡ್ತಾರೆ. ನಾನು ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡ್ತಿದ್ದೇನೆ. ಯತ್ನಾಳ್ ಕೂಡ ಬಿಜೆಪಿ ನಾಯಕರೇ, ವಿಜಯೇಂದ್ರ ಅವರು ಬಿಜೆಪಿ ನಾಯಕರೇ. ತೀರ್ಮಾನ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು" ಎಂದು ತಿಳಿಸಿದರು.
ಬಿವೈವಿ ಬಣ ವಜಾ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, "ಯಾರೋ ಹೇಳಿದ್ರು ಅಂತ ವಜಾ ಮಾಡಕ್ಕಾಗಲ್ಲ. ಕೇಂದ್ರವರು ಅದನ್ನು ತೀರ್ಮಾನ ಮಾಡುತ್ತಾರೆ. ಇದಕ್ಕೆಲ್ಲ ಅಂತ್ಯ ಅವರೇ ಹಾಡ್ತಾರೆ" ಎಂದರು.
ಸಿಎಂ ಬದಲಾವಣೆ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿ, "ನಾನು ಈಗಾಗಲೇ ಸಿಎಂ ಬದಲಾವಣೆ ಬಗ್ಗೆ ಹೇಳಿದ್ದೇನೆ. ನಾನು ಜ್ಯೋತಿಷ್ಯದ ಗಿರಾಕಿ ಅಲ್ಲ. ಡಿಕೆ ಶಿವಕುಮಾರ್, ಪರಮೇಶ್ವರ್ ಜ್ಯೋತಿಷ್ಯ ಕೇಳ್ತಾರೆ. ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ನಾನು ವಿಪಕ್ಷ ನಾಯಕ. ನನಗೂ ಮಾಹಿತಿ ಬರುತ್ತೆ. ನಮಗೂ ಡೆಲ್ಲಿ ಲಿಂಕ್ ಇದೆ. ನಾನು ಜ್ಯೋತಿಷಿ ಅಲ್ಲ, ಆದ್ರೆ ನವೆಂಬರ್ನಲ್ಲಿ ಸಿಎಂ ಬದಲಾವಣೆ ಆಗೋದು ಶತಃಸಿದ್ಧ. ಸಿಎಂ ಬದಲಾವಣೆ ಖಚಿತ. ಯಾರಿಗೆ ಸಿಎಂ ಚೇರ್ ಸಿಗುತ್ತೊ ಗೊತ್ತಿಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮುನಿಯಪ್ಪ