Yashasvi Jaiswal: ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್ ಅವರು ಏಕದಿನ ಮಾದರಿಯಲ್ಲಿ ಇಂದು ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ವಿರಾಟ್ ಕೊಹ್ಲಿ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡಕ್ಕೆ ಸೇರ್ಪಡೆಗೊಂಡಿರುವುದು ಗೊತ್ತಿರುವ ಸಂಗತಿ. ಗಾಯದ ಕಾರಣದಿಂದಾಗಿ ಕಿಂಗ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ದೂರ ಉಳಿದಿದ್ದಾರೆ. ಆದ್ರೆ ಮೊದಲ ಪಂದ್ಯದಲ್ಲೇ ಜೈಸ್ವಾಲ್ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಉಭಯ ತಂಡಗಳ ಮಧ್ಯೆ ನಡೆಯುತ್ತಿರುವ ಮೊದಲ ಪಂದ್ಯಕ್ಕೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದೆ. ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಏಕದಿನ ಸರಣಿ ಇದಾಗಿರುವುದು ಗಮನಾರ್ಹ.
ಸದ್ಯ ಬ್ಯಾಟಿಂಗ್ ಮಾಡಿರುವ ಇಂಗ್ಲೆಂಡ್ ತಂಡ ಭಾರತ ತಂಡಕ್ಕೆ 249 ರನ್ಗಳ ಗುರಿ ನೀಡಿದೆ. ಆಂಗ್ಲರು ನೀಡಿರುವ ಗುರಿಯನ್ನು ಬೆನ್ನತ್ತಿರುವ ಭಾರತಂಡ ಆರಂಭಿಕ ಆಘಾತ ಎದುರಿಸಿತು. ಕೇವಲ 15 ರನ್ಗಳಿಸಿದ್ದ ಯಶಸ್ವಿ ಜೈಸ್ವಾಲ್ ಅವರು ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಸಾಲ್ಟ್ಗೆ ಕ್ಯಾಚ್ ನೀಡಿ ಪೆವಿಲಿಯನ್ಗೆ ನಿರ್ಗಮಿಸಿದರು. ಅಲ್ಪ ಮೊತ್ತಕ್ಕೆ ಕುಸಿದಿದ್ದರಿಂದ ಜೈಸ್ವಾಲ್ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇದಾದ ಬಳಿಕ ನಾಯಕ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿದ್ದಾಗ ಸಾಕಿಬ್ ಮಹಮೂದ್ ಬೌಲಿಂಗ್ನಲ್ಲಿ ಲಿವಿಂಗ್ಸ್ಟೋನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇನ್ನು ಜೈಸ್ವಾಲ್ ಟೆಸ್ಟ್, ಟಿ20 ಮತ್ತು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಟೆಸ್ಟ್ನಲ್ಲಿ 19 ಪಂದ್ಯಗಳನ್ನಾಡಿರುವ ಜೈಸ್ವಾಲ್ 1798 ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕಗಳು ಒಳಗೊಂಡಿವೆ. ಇನ್ನು 23 ಅಂತರಾಷ್ಟ್ರೀಯ ಟಿ20 ಪಂದ್ಯಗಳಾಡಿರುವ ಜೈಸ್ವಾಲ್ 723 ರನ್ ಗಳಿಸಿದ್ದು, ಒಂದು ಶತಕ ಸಿಡಿಸಿದ್ದಾರೆ. ಇನ್ನು 52 ಐಪಿಎಲ್ ಪಂದ್ಯಗಳಲ್ಲಿ 1607 ರನ್ ಗಳಿಸಿರುವ ಜೈಸ್ವಾಲ್ ಎರಡು ಶತಕವನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲ ಟೆಸ್ಟ್, ಟಿ20 ಮತ್ತು ಐಪಿಎಲ್ನಲ್ಲಿ ತಮ್ಮ ಬೌಲಿಂಗ್ ಕೈಚಳವೂ ತೋರಿಸಿದ್ದು, ಆದ್ರೆ ಈ ಮೂರು ವೇದಿಕೆಯಲ್ಲಿ ವಿಕೆಟ್ ಮಾತ್ರ ಪಡೆಯಲಿ ಸಾಧ್ಯವಾಗಿಲ್ಲ.
ವಿರಾಟ್ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು : ಮೊದಲ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಕಾರಣ ಅಭ್ಯಾಸದ ವೇಳೆ ಕೊಹ್ಲಿ ಬಲ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಸಮೀಪಿಸುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕೊಹ್ಲಿಗೆ ಮೊದಲ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಲಾಹೋರ್ನ ಗಡಾಫಿ ಸ್ಟೇಡಿಯಂ ಸಜ್ಜು; ಫೆ.7 ರಂದು ಉದ್ಘಾಟನೆ