ಬೆಳಗಾವಿ: ತಾಲೂಕಿನ ಭೂತರಾಮನಟ್ಟಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ ಸಿಂಹಿಣಿ (ಹೆಣ್ಣು ಸಿಂಹ) ವಯೋಹಜ ಕಾಯಿಲೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನಿರುಪಮಾ ಹೆಸರಿನ 15 ವರ್ಷದ ಈ ಹೆಣ್ಣು ಸಿಂಹಕ್ಕೆ ಕಳೆದ 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿತ್ತು. ಆದರೆ, ಇಂದು(ಫೆ. 6) ಮಧ್ಯಾಹ್ನ 12.55ಕ್ಕೆ ಚಿಕಿತ್ಸೆ ಫಲಕಾರಿ ಆಗದೇ ಮೃಗಾಲಯದಲ್ಲಿ ಸಾವನ್ನಪ್ಪಿದೆ. ವನ್ಯಜೀವಿ ವೈದ್ಯರ ಸಲಹೆಯಂತೆ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃಗಾಲಯದ ಆವರಣದಲ್ಲೇ ಗೌರವಯುತವಾಗಿ ನಿರುಪಮಾ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ವೇಳೆ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರೂ ಆಗಿರುವ ಡಿಎಫ್ಓ ಮಾರಿಯಾ ಕ್ರಿಸ್ಟೋ ರಾಜಾ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ, ಹಿರಿಯ ವೈದ್ಯಾಧಿಕಾರಿ ಡಾ.ಹನುಮಂತ ಸಣ್ಣಕ್ಕಿ, ತಜ್ಞ ವೈದ್ಯ ಡಾ.ಶ್ರೀಕಾಂತ ಕೋಹಳ್ಳಿ, ಮೃಗಾಲಯದ ವೈದ್ಯ ಡಾ. ನಾಗೇಶ ಹುಯಿಲಗೋಳ ಸೇರಿ ಸಿಬ್ಬಂದಿ ಇದ್ದರು.
ಬನ್ನೇರುಘಟ್ಟ ಮೃಗಾಲಯದಿಂದ 2020ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಈ ಸಿಂಹವನ್ನು ತೆಗೆದುಕೊಂಡು ಬರಲಾಗಿತ್ತು. ಅಂದಿನಿಂದ ಇಲ್ಲಿಯೇ ಪ್ರವಾಸಿಗರಿಗೆ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ, ಶ್ವಾಸಕೋಶ ಮತ್ತು ಲಿವರ್ ವೈಪಲ್ಯದಿಂದ ಬಳಲುತ್ತಿತ್ತು. ತಜ್ಞ ವೈದ್ಯರು ಕಳೆದ 15 ದಿನಗಳಿಂದ ಚಿಕಿತ್ಸೆ ನೀಡಿದ್ದರು. ವೈದ್ಯರು ಜೀವ ಉಳಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ಬದುಕುಳಿಯಲಿಲ್ಲ ಎಂದು ಈಟಿವಿ ಭಾರತಕ್ಕೆ ವಲಯ ಅರಣ್ಯಾಧಿಕಾರಿ ಪವನಕುಮಾರ ಕರನಿಂಗ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕಾಲೇಜು ವಾರ್ಷಿಕೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಹೋರಿ