ಜೈಪುರ (ರಾಜಸ್ಥಾನ) : ಇಂದು ಮಧ್ಯಾಹ್ನ ಜೈಪುರದ ದುಡುವಿನ ಮೋಖಂಪುರ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಬಸ್ ಹಾಗೂ ಕಾರಿನ ನಡುವಿನ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರೊಂದಿಗೆ ಸೇರಿ ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ. ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ.
ಅದೇ ಸಮಯದಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿದ್ದು, ಪೊಲೀಸರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಹಾಗೂ ಗಾಯಗೊಂಡವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೊಖಂಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಮೊಖಂಪುರದ ಬಂಬೋರಿಯಾ ಕಿ ಧನಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ. ಕಾರು ಅತೀ ವೇಗವಾಗಿ ಬರುತ್ತಿದ್ದು, ಇದ್ದಕ್ಕಿದ್ದಂತೆ ಕಾರಿನ ಟೈರ್ ಸ್ಫೋಟಗೊಂಡಿದೆ. ಟೈರ್ ಸಿಡಿಯುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ದಾಟಿ, ಇನ್ನೊಂದು ಲೇನ್ಗೆ ಪ್ರವೇಶಿಸಿ ಎದುರಿನಿಂದ ಬರುತ್ತಿದ್ದ ರಾಜಸ್ಥಾನ ರೋಡ್ ವೇಸ್ ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ.
ಎಡಿಎಂ ಗೋಪಾಲ್ ಪರಿಹಾರ್ ಹಾಗೂ ನಾಯಬ್ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ, ಸ್ಥಳದಲ್ಲಿ ಜನ ಜಮಾಯಿಸಿದ್ದು, ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸುವ ಮೂಲಕ ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಮಿರಾಜ್ 2000 ಫೈಟರ್ ಜೆಟ್ ಅಪಘಾತ; ಪೈಲಟ್ಗಳು ಪಾರು