ಬೆಂಗಳೂರು : ರಾಜ್ಯ ಸರ್ಕಾರವು ಬಸ್ ಪ್ರಯಾಣ ದರವನ್ನ ಶೇ.15ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತಿವೆ. ಮತ್ತೊಂದೆಡೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಮತ್ತೊಂದು ಕಡೆ ಪುರುಷ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ನೀಡಿದೆ. ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಸ್ ದರ ಏರಿಸಿರುವುದನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದು ನಮಗೂ ಇಷ್ಟ ಇರಲಿಲ್ಲ. ಅನಿವಾರ್ಯವಾಗಿ ಏರಿಕೆ ಮಾಡಬೇಕಾಯಿತು. ಹಿಂದಿನ ಸರ್ಕಾರದಿಂದ 5,900 ಕೋಟಿ ಸಾಲದ ಹೊರೆ ಇದೆ. 2014 ರಲ್ಲಿ ಕೊನೆ ಬಾರಿ ಬಸ್ ದರ ಹೆಚ್ಚಳ ಮಾಡಲಾಗಿತ್ತು. ಆದರೆ, ಈವರೆಗೂ ದರ ಹೆಚ್ಚಳ ಮಾಡಿರಲಿಲ್ಲ. ಅಂದಿನ ಡಿಸೇಲ್ ದರಕ್ಕೂ ಈಗಿನ ಡಿಸೇಲ್ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂಧನ ವೆಚ್ಚ, ವೇತನ ಸೇರಿದಂತೆ ಎಲ್ಲವೂ ಸರಿದೂಗಿಸಬೇಕು. ಹೀಗಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದರು.
ಆರಂಭದಿಂದಲೂ ಶಕ್ತಿ ಯೋಜನೆ ಬಗ್ಗೆ ಬಿಜೆಪಿ ಅಪಸ್ವರ ಎತ್ತುತ್ತಲೇ ಬಂದಿದ್ದಾರೆ. ಹಿಂದಿನ ಸರ್ಕಾರವು ಸಾರಿಗೆ ನಿಗಮಗಳಿಂದ 5,900 ಸಾಲ ಮಾಡಿದ್ದರಿಂದ ಸಂಸ್ಥೆ ನಿರ್ವಹಣೆ ಕಷ್ಟವಾಗಿದೆ. ಇಂಧನ ಹಾಗೂ ವೇತನ ಸೇರಿದಂತೆ ದಿನಕ್ಕೆ 10 ಕೋಟಿಯಾಗಿದೆ. ಹೀಗಾಗಿ ಬಸ್ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದರು.
ಸಾರಿಗೆ ನೌಕರರ ಬೇಡಿಕೆ ಕುರಿತಂತೆ ಇದೇ 15ರಂದು ಸಿಎಂ ಅವರು ಸಾರಿಗೆ ನೌಕರರ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವ ತನಕ ಶಕ್ತಿ ಯೋಜನೆ ನಿಲ್ಲಿಸುವುದಿಲ್ಲ ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ : ಪ್ರತಿದಿನ ತೆರಿಗೆ ಹೆಚ್ಚಿಸುವುದೇ ರಾಜ್ಯ ಸರ್ಕಾರದ ಸಾಧನೆ; ಬಸ್ ಟಿಕೆಟ್ ದರ ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ - BJP PROTEST