ಈರೋಡ್: ತಮಿಳುನಾಡಿನ ಈರೋಡ್ ಪೂರ್ವ ಮತ್ತು ಉತ್ತರ ಪ್ರದೇಶದ ಅಯೋಧ್ಯೆಯ ಮಿಲ್ಕಿಪುರ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್ ನಾಯಕ ಇವಿಕೆಎಸ್ ಎಳಂಗೋವನ್ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ಅವರಿಂದ ತೆರವಾದ ಕ್ಷೇತ್ರದಲ್ಲಿ ಈ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಡಿಎಂಕೆಯಿಂದ ಮಾಜಿ ಶಾಸಕ ವಿಸಿ ಚಂದ್ರಕುಮಾರ್ ಕಣದಲ್ಲಿದ್ದಾರೆ. ಎನ್ಟಿಕೆಯಿಂದ ಎಂಕೆ ಸೀತಾಲಕ್ಷಿ ಅಖಾಡದಲ್ಲಿದ್ದಾರೆ. ಈ ಚುನಾವಣೆಯಿಂದ ಎಐಎಡಿಎಂಕೆ ಮತ್ತು ಬಿಜೆಪಿ ಸ್ಪರ್ಧೆ ಮಾಡುವುದಿಲ್ಲ ಎಂದು ಪ್ರಕಟಿಸಿದ ಬೆನ್ನಲ್ಲೆ ಡಿಎಂಕೆ ಮತ್ತು ಎನ್ಟಿಕೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಈರೋಡ್ನಲ್ಲಿ ಬೆಳೆಗ್ಗೆ 7ರಿಂದ ಬಿರುಸಿನ ಮತದಾನ ಪ್ರಾರಂಭವಾಗಿದ್ದು, ಈರೋಡ್ ಜಿಲ್ಲಾಧಿಕಾರಿ ರಾಜ ಗೋಪಾಲ್ ಸುಂಕರ ಅವರು ಮೊದಲ ಮತ ಚಲಾಯಿಸಿದರು. ಮತದಾನ ಸಂಜೆ 6ರವರೆಗೆ ಸಾಗಲಿದೆ. ಕ್ಷೇತ್ರದಾದ್ಯಂತ 53 ಸ್ಥಳಗಳಲ್ಲಿ 237 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಮತದಾನದ ಕರ್ತವ್ಯಕ್ಕೆ ಒಟ್ಟು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ 2,27,576 ನೋಂದಾಯಿತ ಮತದಾರರಿದ್ದು, 1,10,128 ಪುರುಷರು, 1,17,381 ಮಹಿಳೆಯರು ಮತ್ತು 37 ತೃತೀಯ ಲಿಂಗಿ ವೋಟರ್ಸ್ ಇದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯ ಮಿಲ್ಕಿಪುರದಲ್ಲಿ ಉಪಚುನಾವಣೆ: ಸಮಾಜವಾಧಿ ಪಕ್ಷದ ನಾಯಕ ಅವಧೇಶ್ ಪ್ರಸಾದ್ 2024ರಲ್ಲಿ ಫೈಜಾಬಾದ್ ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡ ಬಳಿಕ ಅವರು ಮಿಲ್ಕಿಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಇಂದು ಉಪಚುನಾವಣೆ ಸಾಗಿದೆ. ಇಂದು ಬೆಳಗ್ಗೆ 7ರಿಂದಲೇ ಕ್ಷೇತ್ರದಲ್ಲಿ ಮತದಾನ ಸಾಗಿದ್ದು, ಕಣದಲ್ಲಿ ಬಿಜೆಪಿಯ ಚಂದ್ರಭಾನು ಪಾಸ್ವಾನ್ ಮತ್ತು ಸಮಾಜವಾದಿ ಪಕ್ಷದ ಅಜಿತ್ ಪ್ರಸಾದ್ ಎದುರಾಳಿಗಳಾಗಿದ್ದಾರೆ. ಮಿಲ್ಕಿಪುರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದ್ದು, ಚುನಾವಣೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಈ ಕ್ಷೇತ್ರದಲ್ಲಿ ಪಾರದರ್ಶಕ ಮತ್ತು ಸರಾಗ ಮತದಾನಕ್ಕಾಗಿ 210 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 25 ಕೇಂದ್ರದಲ್ಲಿ ವಿಡಿಯೋಗ್ರಫಿ ಮಾಡಲಾಗುತ್ತಿದೆ. ಒಟ್ಟು 71 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್‌ಗಳು, 9 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, 9ಸ್ಟ್ಯಾಟಿಕ್ ಮಾನಿಟರಿಂಗ್ ತಂಡಗಳು, 6ವಿಡಿಯೋ ಮಾನಿಟರಿಂಗ್ ಟೀಂಗಳು, 2 ಸೂಪರ್ ಜೋನಲ್ ಮ್ಯಾಜಿಸ್ಟ್ರೇಟ್‌ಗಳು, 4 ವಲಯ ಮ್ಯಾಜಿಸ್ಟ್ರೇಟ್‌ಗಳು ಮತ್ತು 41 ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳನ್ನು ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ.
ಈ ಎರಡು ಕ್ಷೇತ್ರದ ಉಪ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಫೆ. 8ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. (ಐಎಎನ್ಎಸ್)
ಇದನ್ನೂ ಓದಿ: ದೆಹಲಿ ಚುನಾವಣೆ: ಮತದಾನ ಮಾಡಿದ ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ, ಕೇಂದ್ರ ಸಚಿವ ಪುರಿ
ಇದನ್ನೂ ಓದಿ: ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭೂತಾನ್ ದೊರೆ