ಚಾಮರಾಜನಗರ : ಶಿಕ್ಷಕ ಅಮಾನತು ಆಗಿರುವುದನ್ನು ಖಂಡಿಸಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೇ ಶಾಲಾವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಕ ವೀರಭದ್ರಸ್ವಾಮಿ ಅವರನ್ನು ಅಮಾನತು ಮಾಡಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಎಸ್ಡಿಎಂಸಿ ಸದಸ್ಯರು ಸಾಥ್ ಕೊಟ್ಟಿದ್ದಾರೆ.
ಅಮಾನತು ಏಕೆ? ನೂತನ ವರ್ಷಾಚರಣೆ ಸಂದರ್ಭದಲ್ಲಿ ಗುಂಬಳ್ಳಿ ಪ್ರೌಢಶಾಲೆಯಿಂದ ಶಾಲಾ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಆ ವೇಳೆ ಶಿಕ್ಷಕ ವೀರಭದ್ರಸ್ವಾಮಿ ಅವರು ಬಸ್ ಚಲಾಯಿಸಿದ್ದರು. ಈ ಬಸ್ ಚಾಲನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟೀಕೆಗಳು ವ್ಯಕ್ತವಾಗಿದ್ದವು. ಹಾಗಾಗಿ ವೀರಭದ್ರಸ್ವಾಮಿ ಅವರನ್ನು ಅಮಾನತು ಮಾಡಿ ಡಿಡಿಪಿಐ ರಾಮಚಂದ್ರರಾಜೇ ಅರಸ್ ಆದೇಶ ಹೊರಡಿಸಿದ್ದರು.
ಅಮಾನತು ವಜಾಗೆ ವಿದ್ಯಾರ್ಥಿಗಳ ಪಟ್ಟು : ಬಸ್ ಚಾಲಕನಿಗೆ ವಾಂತಿ ಸೇರಿ ಅನಾರೋಗ್ಯ ಉಂಟಾಗಿತ್ತು. ಚಾಲಕ ಬಸ್ ಓಡಿಸಲು ಆಗದ ಸ್ಥಿತಿಯಲ್ಲಿದ್ದಿದ್ದರಿಂದ ಬಸ್ ಅನ್ನು ವೀರಭದ್ರಸ್ವಾಮಿ ಸೈಡಿಗೆ ಹಾಕಿದ್ದಾರೆ. ಇಷ್ಟಕ್ಕೆ ಅಮಾನತು ಮಾಡಲಾಗಿದೆ. ಈ ಕ್ರಮ ಸರಿಯಲ್ಲ ಎಂಬುದು ವಿದ್ಯಾರ್ಥಿಗಳ ವಾದವಾಗಿದೆ.
ಇನ್ನು, ಶಾಲೆಗೆ ಯಳಂದೂರು ಬಿಇಒ ಭೇಟಿ ಕೊಟ್ಟು ತರಗತಿಗೆ ಹಾಜರಾಗುವಂತೆ ಮನವಿ ಮಾಡಿದರೂ ವಿದ್ಯಾರ್ಥಿಗಳು ಪಟ್ಟು ಸಡಿಲಿಸದೇ ಧರಣಿ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಶಾಲಾ ಪ್ರವಾಸದ ವೇಳೆ ಬಸ್ ಚಲಾಯಿಸಿದ ಶಿಕ್ಷಕ ಅಮಾನತು