ವಾಶಿಂಗ್ಟನ್(ಯುಎಸ್‌ಎ): ಗಾಜಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಫೋಟಕ ಹೇಳಿಕೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಅಮೆರಿಕವು ಗಾಜಾ ಪಟ್ಟಿಯನ್ನು ವಶಪಡಿಸಿಕೊಂಡು ಅಲ್ಲಿ ಉಳಿದಿರುವ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲಿದೆ. ನಾಶವಾದ ಕಟ್ಟಡಗಳನ್ನು ಪುನರ್‌ನಿರ್ಮಾಣ ಮಾಡಲಿದೆ ಹಾಗೂ ಈ ಮೂಲಕ ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಯತ್ನಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಕದನ ವಿರಾಮ-ಒತ್ತೆಯಾಳು ಒಪ್ಪಂದವು ದೀರ್ಘಕಾಲೀನ ಮತ್ತು ಶಾಶ್ವತ ಶಾಂತಿಯ ಆರಂಭವಾಗಿದೆ ಎಂದು ತಿಳಿಸಿದರು.
"ಗಾಜಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಮತ್ತು ನಾವು ಅಲ್ಲಿ ಒಂದಿಷ್ಟು ಕೆಲಸ ಮಾಡಲಿದ್ದೇವೆ. ಆ ಪ್ರದೇಶವನ್ನು ವಶಪಡಿಸಿಕೊಳ್ಳಲಿರುವ ನಾವು ಸ್ಥಳದಲ್ಲಿ ಉಳಿದಿರುವ ಸ್ಫೋಟಗೊಳ್ಳದ ಎಲ್ಲ ಅಪಾಯಕಾರಿ ಬಾಂಬ್ಗಳು, ಇತರ ಶಸ್ತ್ರಾಸ್ತ್ರಗಳನ್ನು ತೆಗೆದುಹಾಕಲು ಮತ್ತು ನಾಶವಾದ ಕಟ್ಟಡಗಳ ಅವಶೇಷಗಳನ್ನು ಸ್ವಚ್ಛಗೊಳಿಸಲು ಜವಾಬ್ದಾರರಾಗಿದ್ದೇವೆ. ಈ ಪ್ರದೇಶದ ಎಲ್ಲ ಜನರಿಗೂ ಉದ್ಯೋಗವಕಾಶ ಸಿಗುವಂತಾಗಲು ಮತ್ತು ಎಲ್ಲರಿಗೂ ಸಾಕಾಗುವಷ್ಟು ಮನೆಗಳು ಲಭ್ಯವಾಗುವಂತೆ ಮಾಡಲು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿದ್ದೇವೆ" ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
"ಇದು ಲಘುವಾಗಿ ತೆಗೆದುಕೊಂಡ ನಿರ್ಧಾರವಲ್ಲ. ನಾನು ಮಾತನಾಡಿಸಿದ ಪ್ರತಿಯೊಬ್ಬರೂ ಯುನೈಟೆಡ್ ಸ್ಟೇಟ್ಸ್ ಆ ತುಂಡು ಭೂಮಿಯನ್ನು ವಶಪಡಿಸಿಕೊಳ್ಳುವ, ಸಾವಿರಾರು ಉದ್ಯೋಗಗಳನ್ನು ಅಭಿವೃದ್ಧಿಪಡಿಸುವ ಮತ್ತು ಅದ್ಭುತವಾದದ್ದನ್ನು ಸೃಷ್ಟಿಸುವ ಕಲ್ಪನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ಟ್ರಂಪ್ ಪ್ರತಿಪಾದಿಸಿದರು.
"ಈ ಕದನ ವಿರಾಮವು ರಕ್ತಪಾತ ಮತ್ತು ಹತ್ಯೆಯನ್ನು ಶಾಶ್ವತವಾಗಿ ಕೊನೆಗೊಳಿಸುವ ಶಾಂತಿಯ ಪ್ರಾರಂಭವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಅದೇ ಗುರಿಯನ್ನು ಗಮನದಲ್ಲಿಟ್ಟುಕೊಂಡು, ನನ್ನ ಆಡಳಿತವು ಮೈತ್ರಿಯಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಲು ಮತ್ತು ಪ್ರದೇಶದಾದ್ಯಂತ ಅಮೆರಿಕದ ಶಕ್ತಿಯನ್ನು ಪುನರ್ ನಿರ್ಮಿಸಲು ತ್ವರಿತವಾಗಿ ಮುನ್ನಡೆಯುತ್ತಿದೆ" ಎಂದು ಅವರು ಹೇಳಿದರು.
ಹಮಾಸ್ ಜೊತೆಗೆ ಸಂಪರ್ಕ ಹೊಂದಿರುವ ಆರೋಪಗಳನ್ನು ಎದುರಿಸುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಮತ್ತು ಯುಎನ್ ರಿಲೀಫ್ ಆ್ಯಂಡ್ ವರ್ಕ್ಸ್ ಏಜೆನ್ಸಿ (ಯುಎನ್ಆರ್ಡಬ್ಲ್ಯೂಎ) ಯಿಂದ ಅಮೆರಿಕ ನಿರ್ಗಮಿಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಟ್ರಂಪ್ ಇದೇ ಸಂದರ್ಭದಲ್ಲಿ ಘೋಷಿಸಿದರು.
ಇರಾನ್ನ ತೈಲ ರಫ್ತುಗಳನ್ನು ಶೂನ್ಯ ಮಟ್ಟಕ್ಕಿಳಿಸಲು ಮತ್ತು ಭಯೋತ್ಪಾದನೆಗೆ ಧನಸಹಾಯ ಮಾಡುವ ಅದರ ಸಾಮರ್ಥ್ಯವನ್ನು ಕಡಿಮೆ ಮಾಡಲು ಯುಎಸ್ ಅದರ ವಿರುದ್ಧ ಅತ್ಯಂತ ದಮನಕಾರಿ ನಿರ್ಬಂಧಗಳನ್ನು ಹೇರಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಇರಾನ್ ಮೇಲೆ ಆರ್ಥಿಕ ಒತ್ತಡ, ಮಾನವ ಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಕ್ಕೆ ಟ್ರಂಪ್ ಆದೇಶ - DONALD TRUMP ORDERS