ಬೆಳಗಾವಿ: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಖಾನಾಪುರದ ತಹಶೀಲ್ದಾರ್‌ರನ್ನು ಅಮಾನತುಗೊಳಿಸಲಾಗಿದೆ. ಪ್ರಕಾಶ್ ಗಾಯಕವಾಡ ಅಮಾನತಾದ ತಹಶೀಲ್ದಾರ್. ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ್ ಹೆಚ್.ಜಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಜ.7ರಂದು ಪ್ರಕಾಶ್ ಗಾಯಕವಾಡ ವಿರುದ್ಧ ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜ.8ರಂದು ಇವರ ಬೆಳಗಾವಿ ಮನೆ, ಖಾನಾಪುರದ ಬಾಡಿಗೆ ಮನೆ ಮತ್ತು ತಹಶೀಲ್ದಾರ್ ಕಚೇರಿ, ನಿಪ್ಪಾಣಿ ಮನೆ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಪ್ರಕಾಶ್, ಬಲ್ಲ ಮೂಲಗಳ ಆದಾಯಕ್ಕಿಂತ 4,09,82,000 ರೂ. ಹೆಚ್ಚಿನ ಆದಾಯ ಹೊಂದಿರುವುದು ದೃಢಪಟ್ಟಿತ್ತು.
![Khanapur Tahsildar suspended for allegedly amassing assets beyond his income](https://etvbharatimages.akamaized.net/etvbharat/prod-images/10-02-2025/bgm-knpr-tahashildar-amanattu_10022025200826_1002f_1739198306_537.jpg)
ಪ್ರಕಾಶ್ ಸ್ಥಾನಕ್ಕೆ ರವೀಂದ್ರ ಹಾದಿಮನಿ ಅವರನ್ನು ನೇಮಿಸಲಾಗಿದ್ದು, ಖಾನಾಪುರದ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಮಾನತು ಆದೇಶ ಹೊರಬೀಳುತ್ತಿದ್ದಂತೆ ಪ್ರಕಾಶ್ ತಮ್ಮ ಕಚೇರಿಯಿಂದ ಸರ್ಕಾರಿ ವಾಹನದಲ್ಲಿ ಮನೆಯತ್ತ ತೆರಳಿದರು.
ಇದನ್ನೂ ಓದಿ: ಹಾವೇರಿ : ಬಾಲಕನ ಕೆನ್ನೆಯ ಗಾಯಕ್ಕೆ ಫೆವಿಕ್ವಿಕ್ ಹಚ್ಚಿದ ನರ್ಸ್ ಅಮಾನತು - NURSE SUSPEND