ವಾಷಿಂಗ್ಟನ್, ಅಮೆರಿಕ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಟೆಸ್ಲಾ ಮುಖ್ಯಸ್ಥ ಹಾಗೂ ಟ್ರಂಪ್ ಅವರ ಪ್ರಮುಖ ಸಲಹೆಗಾರ ಎಲೋನ್ ಮಸ್ಕ್ ಅವರನ್ನು ಭೇಟಿ ಮಾಡಿದರು. ಈ ವೇಳೆ, ಅವರು ಆಡಳಿತ ಸುಧಾರಣೆ ಹಾಗೂ ಸರ್ಕಾರಗಳ ವೆಚ್ಚ ಕಡಿಮೆ ಮಾಡುವ ಸಂಬಂಧ ಮಹತ್ಬದ ಸಮಾಲೋಚನೆ ನಡೆಸಿದರು.
ಸರ್ಕಾರದ ದಕ್ಷತೆ (DOGE) ವಿಭಾಗದ ಮುಖ್ಯಸ್ಥರಾದ ಮಸ್ಕ್ ಅವರೊಂದಿಗಿನ ಸಭೆ ಬಳಿಕ ಮೋದಿ Xನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ನಾನು ಸುಧಾರಣೆಯ ಕಡೆಗೆ ಭಾರತವನ್ನು ತೆಗೆದುಕೊಂಡು ಹೋಗುವ ಪ್ರಯತ್ನಗಳನ್ನ ಮಾಡುತ್ತಿದ್ದೇನೆ. 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ'ದ ಬಗ್ಗೆ ಮಸ್ಕ್ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಮಸ್ಕ್ ಅಮೆರಿಕದಲ್ಲಿ ಸರ್ಕಾರದ ದಕ್ಷತೆ ಹೆಚ್ಚಿಸುವ ಹಾಗೂ ಅನಗತ್ಯ ಖರ್ಚು ಕಡಿಮೆ ಮಾಡುವ ಗುರಿಯೊಂದಿಗೆ ತನ್ನ ಪ್ರಯತ್ನವನ್ನು ಆರಂಭಿಸಿದ್ದಾರೆ. ಶ್ವೇತಭವನದಿಂದ 100 ಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಬ್ಲೇರ್ ಹೌಸ್‌ನಲ್ಲಿ ಮಸ್ಕ್ ಅವರು ಪ್ರಧಾನ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಸ್ಕ್ ಜತೆಗಿನ ಮಾತುಕತೆ ಬಳಿಕ ಮೋದಿ ಟ್ರಂಪ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
Had a very good meeting with @elonmusk in Washington DC. We discussed various issues, including those he is passionate about such as space, mobility, technology and innovation. I talked about India’s efforts towards reform and furthering ‘Minimum Government, Maximum Governance.’ pic.twitter.com/7xNEqnxERZ
— Narendra Modi (@narendramodi) February 13, 2025
ನಾವು ಬಾಹ್ಯಾಕಾಶ, ಚಲನಶೀಲತೆ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಬಗ್ಗೆ ಅವರು ಉತ್ಸುಕರಾಗಿರುವಂತಹ ವಿವಿಧ ವಿಷಯಗಳನ್ನು ಚರ್ಚಿಸಿದ್ದೇವೆ ಎಂದು ಮೋದಿ ತಮ್ಮ ಮತ್ತೊಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಮಾತುಕತೆ ವೇಳೆ ಇವರೆಲ್ಲ ಇದ್ದರು: ಪ್ರಧಾನಿ ಮೋದಿ ಅವರೊಂದಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಅಮೆರಿಕದ ರಾಯಭಾರಿ ವಿನಯ್ ಕ್ವಾತ್ರಾ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿ ಮೋದಿ ಮತ್ತು ಮಸ್ಕ್ ಈ ಹಿಂದೆ ಹಲವಾರು ಬಾರಿ ಭೇಟಿಯಾಗಿದ್ದಾರೆ. ಭಾರತೀಯ ಮಾರುಕಟ್ಟೆಗೆ ಟೆಸ್ಲಾದ ಕೈಗೆಟುಕುವ ಕಾರು ಅಭಿವೃದ್ಧಿಪಡಿಸುವ ಕಲ್ಪನೆಯೊಂದಿಗೆ ಮಸ್ಕ್ ಸಮಾಲೋಚನೆ ನಡೆಸಿದ್ದಾರೆ. ಆದರೆ, ಈ ವಿಚಾರವಾಗಿ ಹೆಚ್ಚಿನ ಬೆಳವಣಿಗೆಗಳೇನು ಕಂಡು ಬಂದಿಲ್ಲ.
ಈ ಭೇಟಿ ಏಕೆ ಮಹತ್ವದ್ದು ಗೊತ್ತಾ?: ಟ್ರಂಪ್ ಆಡಳಿತದಲ್ಲಿ ಮಸ್ಕ್ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಫೆಡರಲ್ ಸರ್ಕಾರದ ದಕ್ಷತೆಯನ್ನು ಸುಧಾರಿಸುವ ಹೊಣೆಯನ್ನು ಅಮೆರಿಕ ಅಧ್ಯಕ್ಷರು ಮಸ್ಕ್ ಅವರಿಗೆ ವಹಿಸಿದ್ದಾರೆ. ಪ್ರಯತ್ನಗಳು ಈಗಾಗಲೇ ಕಾಣಿಸಿಕೊಳ್ಳುತ್ತಿವೆ. ಅಮೆರಿಕದ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ ಮುಚ್ಚಲು ಕಾರಣವಾಗಿವೆ. ಆ ಸಂಸ್ಥೆಯಲ್ಲಿ ನಡೆಯುತ್ತಿದ್ದ ಕೆಲಸಗಳನ್ನು ಸ್ಟೇಟ್ ಡಿಪಾರ್ಟ್ ಮೆಂಟ್ ನೊಂದಿಗೆ ವಿಲೀನಗೊಳಿಸಲಾಗಿದೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ, ಬ್ಲೇರ್ ಹೌಸ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದಕ್ಕೂ ಪೂರ್ವದಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಜತೆ ಸಮಾಲೋಚನೆ ನಡೆಸಿದ್ದರು. ಗಬ್ಬಾರ್ಡ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅವರನ್ನು ಭೇಟಿ ಮಾಡಿ ಮೋದಿ ಮಾತುಕತೆ ನಡೆಸಿದ್ದು ವಿಶೇಷ. 18 ಸದಸ್ಯರ ಗುಪ್ತಚರ ಸಮುದಾಯದ ಮುಖ್ಯಸ್ಥರನ್ನಾಗಿ ಗಬ್ಬಾರ್ಡ್ ಅವರನ್ನು ಟ್ರಂಪ್ ನೇಮಕ ಮಾಡಿದ್ದಾರೆ.