ಮೈಸೂರು: ಮೈಸೂರು ನಗರ ಸಿಸಿಬಿಯ ಎಸಿಪಿ ಸೇರಿ ಮೂವರು ಡಿವೈಎಸ್‌ಪಿ ವೃಂದದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಇಲಾಖೆ ಆದೇಶಿಸಿದೆ.
ಸಿಐಡಿಯಲ್ಲಿದ್ದ ಮೊಹಮ್ಮದ್ ಶರೀಫ್ ರಾವುತರ್ ಅವರನ್ನು ಮೈಸೂರು ನಗರ ಸಿಸಿಬಿಯ ಎಸಿಪಿಯಾಗಿ, ರಾಜೇಂದ್ರ ಕೆ. ಅವರನ್ನು ದೇವರಾಜ ಉಪವಿಭಾಗದ ಎಸಿಪಿಯಾಗಿ ಮತ್ತು ಕೆಪಿಎ ಡಿವೈಎಸ್ಪಿಯಾಗಿದ್ದ ಶಿವಶಂಕರ್ ಎಂ. ಅವರನ್ನು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿಯಾಗಿ ವರ್ಗಾಯಿಸಲಾಗಿದೆ.
ವರ್ಗಾಯಿಸಲಾದ ಸ್ಥಳದಲ್ಲಿ ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳುವಂತೆ ಆದೇಶಿಸಿಲಾಗಿದೆ. ಜೊತೆಗೆ ಇನ್ನು ನಿಯುಕ್ತಿಗೊಳಿಸದಿರುವ ಡಿವೈಎಸ್‌ಪಿ ವೃಂದದ ಅಧಿಕಾರಿಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಆಡಳಿತ ಎಡಿಜಿಪಿ ಸೌಮೇಂದು ಮುಖರ್ಜಿ ಆದೇಶದಲ್ಲಿ ತಿಳಿಸಿದ್ದಾರೆ.
![ಡಿವೈಎಸ್‌ಪಿ ವೃಂದದ ಅಧಿಕಾರಿಗಳ ವರ್ಗಾವಣೆ,ಉದಯಗಿರಿ ಪ್ರಕರಣ, ಸಿಸಿಬಿ ಎಸಿಪಿ ವರ್ಗಾವಣೆ,CCB ACP,Police Transfer](https://etvbharatimages.akamaized.net/etvbharat/prod-images/14-02-2025/kn-mys-01-udayagiri-vis-ka10003_13022025231628_1302f_1739468788_268.jpg)
ಉದಯಗಿರಿ ಪ್ರಕರಣ ಬೆನ್ನಲ್ಲೇ ವರ್ಗಾವಣೆ: ಉದಯಗಿರಿ ಪೊಲೀಸ್ ಠಾಣೆ ಮತ್ತು ಪೊಲೀಸರ ಮೇಲಿನ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ಸರ್ಕಾರ ಸಿಸಿಬಿಗೆ ವಹಿಸಿದೆ. ಈ ಬೆನ್ನಲ್ಲೇ ಮೈಸೂರು ನಗರ ಸಿಸಿಬಿಯ ಎಸಿಪಿಯನ್ನು ವರ್ಗಾವಣೆ ಮಾಡಿ, ಬೇರೊಬ್ಬರನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.
ಸೋಮವಾರ ರಾತ್ರಿ ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಅವಹೇಳನಕಾರಿ ಪೋಸ್ಟರ್ ಸಂಬಂಧ ಉದ್ರಿಕ್ತ ಗುಂಪು ಪೊಲೀಸರು ಮತ್ತು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿತ್ತು. ಘಟನೆಯಲ್ಲಿ ಎಸಿಪಿ ಶಾಂತಮಲ್ಲಪ್ಪ ಸೇರಿ 14 ಮಂದಿ ಪೊಲೀಸರು ಗಾಯಗೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ತನಿಖೆಯನ್ನು ಬುಧವಾರ ಸಿಸಿಬಿಗೆ ವಹಿಸಿತ್ತು. ಈ ಬೆನ್ನಲ್ಲೇ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಅವರಿದ್ದ ಸ್ಥಳಕ್ಕೆ ಮೊಹಮ್ಮದ್ ಶರೀಫ್ ರಾವುತರ್ ಅವರನ್ನು ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ.
ಜೊತೆಗೆ ಸೋಮವಾರ ಉದಯಗಿರಿ ಗಲಾಟೆಯಲ್ಲಿ ಕಲ್ಲೇಟು ತಿಂದು ಗಾಯಗೊಂಡಿದ್ದ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಅವರನ್ನು ವರ್ಗಾವಣೆ ಮಾಡಿದ್ದು, ಇವರ ಸ್ಥಳಕ್ಕೆ ರಾಜೇಂದ್ರ ಕೆ. ಅವರನ್ನು ನಿಯೋಜಿಸಿದೆ.
ಇದನ್ನೂ ಓದಿ: ಉದಯಗಿರಿ ಕಲ್ಲು ತೂರಾಟ ಪ್ರಕರಣ: ಹಲವರನ್ನು ವಶಕ್ಕೆ ಪಡೆದ ಪೊಲೀಸರು
ಇದನ್ನೂ ಓದಿ: ಅವಹೇಳನಕಾರಿ ಪೋಸ್ಟರ್ನಿಂದ ಉದ್ವಿಗ್ನಗೊಂಡಿದ್ದ ಉದಯಗಿರಿ ಪರಿಸ್ಥಿತಿ ಶಾಂತ; ಎಡಿಜಿಪಿ