ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆ ಹೊತ್ತಲ್ಲೇ, ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ನಾಯಕರ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗುತ್ತಿವೆ. ಸಿಎಂ ಅತಿಶಿ, ಅರವಿಂದ್ ಕೇಜ್ರಿವಾಲ್ ಬಳಿಕ ಶಾಸಕ ದಿನೇಶ್ ಮೋಹಾನಿಯಾ ವಿರುದ್ಧ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೇಸ್ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನೇಶ್ ಮೋಹಾನಿಯಾ ಅವರು ಮಹಿಳೆಯ ಜೊತೆಗೆ ಅನುಚಿತ ಸನ್ನೆ ಮಾಡಿದ ಮತ್ತು ಅವರಿಗೆ ಗಾಳಿಯಲ್ಲಿ ಚುಂಬಿಸಿದ (ಫ್ಲೈಯಿಂಗ್ ಕಿಸ್) ಆರೋಪ ಹೊರಿಸಲಾಗಿದೆ. ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್ಎಸ್) ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಆಪ್ ಶಾಸಕ ದಿನೇಶ್ ಮೋಹಾನಿಯಾ ಅವರು ತಮಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅನುಚಿವಾಗಿ ವರ್ತಿಸಿದ್ದಾರೆ. ಇದು ನನ್ನ ಘನತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಂಗಮ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಓದಿ: ಯಮುನಾ ನದಿಗೆ ವಿಷ ಆರೋಪ: ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದ ಪೊಲೀಸರು
ಸಂಗಮ್ ವಿಹಾರ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ದಿನೇಶ್ ಮೋಹಾನಿಯಾ ಸದ್ಯ ಅದೇ ಕ್ಷೇತ್ರದಿಂದ ಚುನಾವಣಾ ಕಣದಲ್ಲಿದ್ದಾರೆ. ಇವರ ವಿರುದ್ಧ ಬಿಜೆಪಿಯ ಚಂದನ್ ಕುಮಾರ್ ಚೌಧರಿ ಮತ್ತು ಕಾಂಗ್ರೆಸ್‌ನ ಹರ್ಷ್ ಚೌಧರಿ ಸವಾಲು ಎಸೆದಿದ್ದಾರೆ. ರಾಷ್ಟ್ರ ರಾಜಧಾನಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ದೆಹಲಿಯಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ 70 ವಿಧಾನಸಭಾ ಸ್ಥಾನಗಳಿಗೆ ಮತದಾನ ಆರಂಭವಾಗಿದೆ. 9 ಗಂಟೆವರೆಗೆ ಶೇಕಡಾ 8.10 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸಿಎಂ, ಮಾಜಿ ಸಿಎಂ ವಿರುದ್ಧ ಕೇಸ್: ಇದಕ್ಕೂ ಮೊದಲು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಸಿಎಂ ಅತಿಶಿ ವಿರುದ್ಧ, ಯಮುನಾ ನದಿಗೆ ವಿಷ ಹಾಕಿದ ಆರೋಪದ ಮೇಲೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಕೇಸ್ ದಾಖಲಿಸಲಾಗಿದೆ.
ಚುನಾವಣಾ ಆಯೋಗ ತಮ್ಮ ವಿರುದ್ಧ ಬೇಕಂತಲೇ ಸಮರ ಸಾರಿದೆ ಎಂದು ಆರೋಪಿಸಿ ಆಪ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಆಯೋಗವೂ ತಿರುಗೇಟು ನೀಡಿದ್ದು, ಸಂಸ್ಥೆಯು ಯಾವುದೇ ಪಕ್ಷದ ಪರವಾಗಿಲ್ಲ. ನಿಯಮಗಳನ್ನು ಮೀರುವ ಯಾವುದೇ ಅಭ್ಯರ್ಥಿಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ದೆಹಲಿ ಚುನಾವಣೆ: ಮತದಾನ ಮಾಡಿದ ರಾಷ್ಟ್ರಪತಿ ಮುರ್ಮು, ರಾಹುಲ್ ಗಾಂಧಿ, ಕೇಂದ್ರ ಸಚಿವ ಪುರಿ