ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳಿಗೆ ಅಂಕುಶ ಹಾಕಲು ಸ್ಪೀಕರ್ ಯು.ಟಿ.ಖಾದರ್ ವಿಧಾನಸೌಧ ಆವರಣದಲ್ಲೇ ಶ್ವಾನಗಳಿಗೆ ಪ್ರತ್ಯೇಕ ಸ್ಥಳ ಗುರುತಿಸಿ ಶೆಲ್ಟರ್ ನಿರ್ಮಿಸಲು ಮುಂದಾಗಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ವಿಧಾನಸೌಧ ಆವರಣದಲ್ಲಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿವಿಧ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ವಿಧಾನಸೌಧ ಆವರಣದಲ್ಲಿ 54 ಬೀದಿ ನಾಯಿಗಳು: ವಿಧಾನಸೌಧ ಆವರಣದಲ್ಲಿ ಸುಮಾರು 54 ಬೀದಿ ನಾಯಿಗಳು ಇವೆ. ಈ ಬೀದಿ ನಾಯಿಗಳ ಓಡಾಟದಿಂದ ಸಾರ್ವಜನಿಕರಿಗೆ, ಅಧಿಕಾರಿಗಳಿಗೆ, ವಾಹನ ಚಾಲಕರಿಗೆ ಸಮಸ್ಯೆ ಎದುರಾಗುತ್ತಿದೆ. ಶಾಲಾ ಮಕ್ಕಳು ವಿಧಾನಸೌಧಕ್ಕೆ ಬರುವಾಗ ಬೀದಿ ನಾಯಿಗಳು ದಾಳಿ ನಡೆಸಲು ಮುಂದಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇತ್ತ ವಿಧಾನಸೌಧ ಆವರಣ, ಪಾರ್ಕ್, ನೆಲ ಮಹಡಿ, ವರಾಂಡಗಳಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ. ಸರ್ಕಾರಿ ಸಾಮಾರಂಭದ ವೇಳೆಯೂ ವಿಧಾನಸೌಧದಲ್ಲಿನ ಬೀದಿ ನಾಯಿಗಳು ಅಪಾಯ ಉಂಟು ಮಾಡುತ್ತಿವೆ ಎಂಬ ದೂರುಗಳು ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸ್ಪೀಕರ್ ಯು.ಟಿ.ಖಾದರ್ ಅವುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ''ಪ್ರಾಣಿಗಳಿಗೆ ಮಾತನಾಡಲು ಆಗುತ್ತಾ. ಅವುಗಳ ಕಷ್ಟವನ್ನು ನಾವು ನೋಡಬೇಕು. ವಿಧಾನಸೌಧದ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುವಾಗ, ವಿಧಾನಸೌಧ ನೋಡಲು ಮಕ್ಕಳು ಬಂದಾಗ ಅವನ್ನು ಕಂಡು ಭಯಭೀತರಾಗುತ್ತಾರೆ. ನಾಯಿಗಳನ್ನು ಇಲ್ಲಿಂದ ತೆರವು ಮಾಡಬೇಕೆಂದು ಚರ್ಚೆ ಮಾಡಿದ್ದೇವೆ. ಇದಕ್ಕೆ ಪರ, ವಿರೋಧ ಎರಡು ಇದೆ. ನಾಯಿಗಳನ್ನು ಎಲ್ಲಿ ಬಿಡಬೇಕು ಎಂಬ ಬಗ್ಗೆಯೂ ಚರ್ಚೆ ಆಯಿತು'' ಎಂದು ತಿಳಿಸಿದರು.
''ಇವತ್ತು ಸಭಾಪತಿಗಳು, ಮುಖ್ಯ ಕಾರ್ಯದರ್ಶಿ, ಆರೋಗ್ಯ ಸಚಿವರು, ಡಿಪಿಆರ್, ವಿಧಾನಸೌಧ ಪೊಲೀಸ್, ಪಿಡಬ್ಲ್ಯೂಡಿ ಇಲಾಖೆಯವರು ಸಭೆ ಮಾಡಿದ್ವೇವೆ. 54 ನಾಯಿಗಳು ವಿಧಾನಸೌಧ ಆವರಣದಲ್ಲಿ ಇವೆ. ಮಳೆಗಾಲ, ಬಿಸಿಲು ಬಂದಾಗ ಶೆಲ್ಟರ್ ಎಲ್ಲಿ ಇರುತ್ತದೆಯೋ ಅಲ್ಲಿಗೆ ಹೋಗುತ್ತವೆ. ಅವುಗಳನ್ನು ಬೇರೆ ಕಡೆ ಶಿಫ್ಟ್ ಮಾಡಲು ಆಗುವುದಿಲ್ಲ'' ಎಂದು ಹೇಳಿದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ನಿಯಮ ಪಾಲನೆಗೆ ಸಿಎಸ್ ಸೂಚನೆ: ಇಲ್ಲಿದೆ ಸಹಾಯವಾಣಿ
''ಇದಕ್ಕಾಗಿ ವಿಧಾನಸೌಧದ ಆವರಣದಲ್ಲಿ ಒಂದು ಶೆಲ್ಟರ್ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಅವುಗಳನ್ನು ನೋಡಲು ಸಿಬ್ಬಂದಿ ನಿಯೋಜಿಸಲಾಗುವುದು. ಎನ್ಜಿಒಗೆ ವಹಿಸಿದರೆ ಪ್ರಾಣಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ನಾಯಿಗಳಿಗೆ ವಿಧಾನಸೌಧ ಆವರಣದಲ್ಲೇ ಪ್ರತ್ಯೇಕ ಸ್ಥಳ ಗುರುತು ಮಾಡಿ, ವ್ಯವಸ್ಥೆ ಮಾಡಲು ಒಂದು ಅಂದಾಜು ವೆಚ್ಚದ ವರದಿ ನೀಡಲು ತಿಳಿಸಿದ್ದೇವೆ. 15 ದಿನಗಳ ಒಳಗೆ ಟೆಂಡರ್ ಕರೆಯುತ್ತೇವೆ'' ಎಂದರು.
ಇದನ್ನೂ ಓದಿ: ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅನುಮತಿ ಸೂಕ್ತ: ದಿನೇಶ್ ಗುಂಡೂರಾವ್