ಪ್ರಯಾಗರಾಜ್, ಉತ್ತರಪ್ರದೇಶ: ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಪ್ರಯಾಗರಾಜ್ಗೆ ಭೇಟಿ ನೀಡುತ್ತಿದ್ದಾರೆ. ಜನವರಿ 13 ರಂದು ಪ್ರಾರಂಭವಾದ ಕುಂಭಮೇಳ ಭಾರಿ ಸುದ್ದಿ ಮಾಡುತ್ತಿದೆ. ದೇಶ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತಾ ಏಜೆನ್ಸಿಗಳು ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ನಗರದಲ್ಲಿ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಪ್ರಧಾನಿ ಭೇಟಿಯ ರೂಟ್ ಮ್ಯಾಪ್ ಹೀಗಿದೆ: ಅಧಿಕಾರಿಗಳು ನೀಡಿದ ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ಅವರು ಬೆಳಗ್ಗೆ 10:00 ಗಂಟೆಗೆ ಪ್ರಯಾಗರಾಜ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ, ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ನೈನಿಯಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ಮೈದಾನವನ್ನು ತಲುಪಲಿದ್ದಾರೆ. 10:45 AM ಹೊತ್ತಿಗೆ ಅವರು ಅರೇಲ್ ಘಾಟ್ ತಲುಪುವ ನಿರೀಕ್ಷೆಯಿದೆ ಮತ್ತು ನಂತರ ತ್ರಿವೇಣಿ ಸಂಗಮ್ ಗೆ ದೋಣಿಯಲ್ಲಿ ಸವಾರಿ ಮಾಡುತ್ತಾರೆ. 11:00 AM ಮತ್ತು 11:30 AM ನಡುವೆ ಮೋದಿ ಅವರು ಸುಮಾರು ಅರ್ಧ ಗಂಟೆ ಮೇಳದಲ್ಲಿ ಕಳೆಯಲಿದ್ದಾರೆ.
ಮಧ್ಯಾಹ್ನ ದೆಹಲಿಗೆ ವಾಪಸ್: ಪವಿತ್ರ ಸ್ನಾನ ಮಾಡಿದ ನಂತರ ವಿಶೇಷ ಪೂಜೆ ಸಲ್ಲಿಸುವ ಅವರು ಮಧ್ಯಾಹ್ನ 12:30 ಕ್ಕೆ ನವದೆಹಲಿಗೆ ವಾಪಸ್ ಆಗಲಿದ್ದಾರೆ. ಅದಕ್ಕೂ ಮುನ್ನ ಅವರು ಸಾಧು- ಸಂತರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಸುಮಾರು ಎರಡೂವರೆ ಗಂಟೆಗಳ ಕಾಲ ಅವರು ಮಹಾಕುಂಭದಲ್ಲಿ ಇರಲಿದ್ದಾರೆ. ಎರಡು ತಿಂಗಳಲ್ಲಿ ಪ್ರಯಾಗ್‌ರಾಜ್‌ಗೆ ಮೋದಿಯವರ ಎರಡನೇ ಭೇಟಿ ಇದಾಗಿದೆ. ಅವರು ಡಿಸೆಂಬರ್ 13, 2024 ರಂದು ಪ್ರಯಾಗ್ ರಾಜ್ ಗೆ ಭೇಟಿ ನೀಡಿದ್ದರು.
#WATCH | Prayagraj | Visuals from the Ghats of Triveni Sangam as people continue to take a holy dip.
— ANI (@ANI) February 5, 2025
Around 39 crore devotees have taken a holy dip so far at #MahaKumbh2025 - the world's largest religious congregation pic.twitter.com/MnTDNvMSFA
ಮೌನಿ ಅಮವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಿಂದಾಗಿ 30 ಭಕ್ತರು ಪ್ರಾಣಕಳೆದುಕೊಂಡಿದ್ದರೆ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ತಮ್ಮ ಮಹಾಕುಂಭ ಭೇಟಿಯನ್ನು ರದ್ದುಗೊಳಿಸಬಹುದು ಎಂಬ ಊಹಾಪೋಹಗಳಿದ್ದವು. ಆದರೆ ಮೋದಿ ಇಂದು ಆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಿದ್ದಾರೆ.
2019 ರ ಕುಂಭಮೇಳದ ಸಮಯದಲ್ಲಿ ಪ್ರಧಾನಿ ಮೋದಿ ಅವರು ನೈರ್ಮಲ್ಯ ಕಾರ್ಮಿಕರ ಸೇವೆಗೆ ಕೃತಜ್ಞತೆಯ ಸಂಕೇತವಾಗಿ ಅವರ ಪಾದಗಳನ್ನು ತೊಳೆಯುವ ಮೂಲಕ ಗೌರವ ಸಮರ್ಪಣೆ ಮಾಡಿದ್ದರು.
ಇದನ್ನು ಓದಿ: 25 ಕೋಟಿ ಜನ ಬಡತನದಿಂದ ಹೊರಕ್ಕೆ; SC, ST, OBC ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಹೆಚ್ಚಳ: ಲೋಕಸಭೆಯಲ್ಲಿ ಮೋದಿ