ನವದೆಹಲಿ: ಒಂದು ಕಾಲದಲ್ಲಿ ಕೇವಲ ಚುನಾವಣಾ ಪ್ರಚಾರದ ಭಾಗವಾಗಿದ್ದ ಉಚಿತ ಕೊಡುಗೆಗಳ ಭರವಸೆಗಳು ದೇಶದಲ್ಲಿ ಈಗ ಚುನಾವಣೆಗಳನ್ನು ಗೆಲ್ಲುವ ಪ್ರಮುಖ ಕಾರ್ಯತಂತ್ರವಾಗಿ ಮಾರ್ಪಟ್ಟಿವೆ. ರಾಜ್ಯ ಸರ್ಕಾರದ ಬೊಕ್ಕಸಗಳು ಬರಿದಾದರೂ ಅದನ್ನು ಲೆಕ್ಕಿಸದೇ, ರಾಜಕೀಯ ಪಕ್ಷಗಳು ಮತಗಳನ್ನು ಪಡೆಯಲು ಕಲ್ಯಾಣ ಯೋಜನೆಗಳ ಹೆಸರಿನಲ್ಲಿ ಉಚಿತ ಕೊಡುಗೆಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿವೆ ಎಂದು ಎಕ್ವಿಟಾಸ್ ಇನ್ವೆಸ್ಟ್ ಮೆಂಟ್ಸ್ ನ ವರದಿ ಹೇಳಿದೆ.
ಗ್ಯಾರಂಟಿಗಳು ಈಗ ಅಧಿಕಾರಕ್ಕೆ ತರಬಲ್ಲ ಕರೆನ್ಸಿಗಳು: "ಏನೇ ಆದರೂ ಚುನಾವಣೆಗಳಲ್ಲಿ ಗೆಲುವು ಸಾಧಿಸಲೇಬೇಕೆಂಬ ರಾಜಕೀಯ ಮೇಲಾಟದಲ್ಲಿ ಕಲ್ಯಾಣ ಯೋಜನೆಗಳು ಮತ್ತು ಉಚಿತ ಕೊಡುಗೆಗಳು ಈಗ ಕೇವಲ ಆಶ್ವಾಸನೆಗಳಾಗಿ ಉಳಿಯದೇ ಅವು ರಾಜಕೀಯ ಅಧಿಕಾರವನ್ನು ತರಬಲ್ಲ ಹೊಸ ಕರೆನ್ಸಿಯಾಗಿ ಬದಲಾಗಿವೆ" ಎಂದು ಅದು ಹೇಳಿದೆ.
ಅಲ್ಪಾವಧಿಯಲ್ಲಿ ಲಾಭ ದೀರ್ಘಾವಧಿಯಲ್ಲಿ ಬಹುದೊಡ್ಡ ಸವಾಲು: ರಾಜಕೀಯ ಅಧಿಕಾರಕ್ಕಾಗಿ ತೀವ್ರ ಪೈಪೋಟಿಯ ಮಧ್ಯೆ ಉಚಿತ ಕೊಡುಗೆಗಳ ಅಲ್ಪಾವಧಿಯ ರಾಜಕೀಯ ಲಾಭಗಳು ದೀರ್ಘಕಾಲೀನ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ಸವಾಲಾಗಿದೆ ಎಂದು ವರದಿ ತಿಳಿಸಿದೆ.
2024 ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ದೇಶದ ಹಣಕಾಸಿನ ನೀತಿಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂದು ಅದು ಹೇಳಿದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಎಷ್ಟು ಕೆಳಮಟ್ಟಕ್ಕಿಳಿಯಬಹುದು ಎಂಬುದು ರಾಜ್ಯಗಳ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಪರಸ್ಪರರನ್ನು ಮೀರಿಸಲು ಪಕ್ಷಗಳು ಹೆಚ್ಚೆಚ್ಚು ಉಚಿತ ಕೊಡುಗೆಗಳನ್ನು ನೀಡುತ್ತಿವೆ. ಈ ಕಲ್ಯಾಣ ಯೋಜನೆಗಳು ಅಲ್ಪಾವಧಿಯಲ್ಲಿ ನಾಗರಿಕರಿಗೆ ಪ್ರಯೋಜನಕಾರಿಯಾಗಿದ್ದರೂ, ದೀರ್ಘಾವಧಿಯಲ್ಲಿ ರಾಜ್ಯಗಳಿಗೆ ಗಂಭೀರ ಆರ್ಥಿಕ ಅಪಾಯಗಳನ್ನುಂಟು ಮಾಡುತ್ತವೆ ಎಂದು ವರದಿ ಹೇಳಿದೆ.
ಕರ್ನಾಟಕವನ್ನೇ ಉದಾಹರಣೆಯಾಗಿ ನೋಡಿದರೆ - ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಂತರ ಕಾಂಗ್ರೆಸ್ ಹಲವಾರು ದುಬಾರಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿತು. ಮಹಿಳೆಯರಿಗೆ ತಿಂಗಳಿಗೆ 2,000 ರೂ.ಗಳನ್ನು ಒದಗಿಸುವ ಗೃಹ ಲಕ್ಷ್ಮಿ ಯೋಜನೆ ಮತ್ತು 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಒಟ್ಟಾಗಿ ಸುಮಾರು 52,000 ಕೋಟಿ ರೂ.ಗಳ ವೆಚ್ಚಕ್ಕೆ ಕಾರಣವಾಗಿವೆ. ಈ ಮೊತ್ತವು 2023-24ರ ರಾಜ್ಯದ ವಿತ್ತೀಯ ಕೊರತೆಯ ಶೇಕಡಾ 78 ರಷ್ಟಿದೆ. ಇದು ಕರ್ನಾಟಕದ ಆರ್ಥಿಕ ಸ್ಥಿರತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಯೋಜಿತ ಕಲ್ಯಾಣ ವೆಚ್ಚವು ಕೇವಲ 2100 ಕೋಟಿ ರೂ. ಆಗಿತ್ತು ಎಂದು ವರದಿ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ವಾರ್ಷಿಕ 44ಸಾವಿರ ಕೋಟಿ ಹೊರೆ: ಈ ಪ್ರವೃತ್ತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರ ರಾಜ್ಯಗಳು ಕೂಡ ದುಬಾರಿ ಉಚಿತ ಕೊಡುಗೆಗಳನ್ನು ಘೋಷಿಸಿವೆ. ಮಹಾರಾಷ್ಟ್ರವು ಲಾಡ್ಲಿ ಬೆಹನಾ ಯೋಜನೆ, ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ರದ್ದು, ಕೃಷಿ ಸಾಲ ಮನ್ನಾ ಮತ್ತು ಉಚಿತ ಆರೋಗ್ಯ ರಕ್ಷಣೆಯಂತಹ ಯೋಜನೆಗಳನ್ನು ಪ್ರಾರಂಭಿಸಿದೆ. ಇದು ಬೊಕ್ಕಸಕ್ಕೆ ವಾರ್ಷಿಕವಾಗಿ 44,000 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. ಇನ್ನು ಉತ್ತರ ಪ್ರದೇಶ ಸರ್ಕಾರ ಕೂಡ ಮಹಿಳೆಯರ ಪಿಂಚಣಿ ಮತ್ತು ವೃದ್ಧಾಪ್ಯ ಕಲ್ಯಾಣ ಕಾರ್ಯಕ್ರಮಗಳಿಗೆ 36,000 ಕೋಟಿ ರೂ. ಮೀಸಲಿಟ್ಟಿದೆ.
ಬಿಹಾರವು ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 75 ರಷ್ಟು ಮೀಸಲಾತಿ ನೀತಿ ಪರಿಚಯಿಸಿದೆ. ದೆಹಲಿ ಸರ್ಕಾರ ವಿದ್ಯುತ್ ಸಬ್ಸಿಡಿಗಳನ್ನು ಹೆಚ್ಚಿಸಿದೆ. ಈ ಮೂಲಕ 2.2 ಮಿಲಿಯನ್ ಕುಟುಂಬಗಳಿಗೆ ಶೂನ್ಯ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ 2100 - 2500 ರೂ.ಗಳ ಭರವಸೆ ನೀಡಲಾಗಿದೆ. ಜೊತೆಗೆ ಈಗಾಗಲೇ ದೆಹಲಿಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಲಾಗಿದೆ. ದೆಹಲಿ ತನ್ನದೇ ಹಣಕಾಸು ಇಲಾಖೆಯ ವಿರೋಧದ ಹೊರತಾಗಿಯೂ 2024-25ನೇ ಸಾಲಿಗೆ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ (ಎನ್ಎಸ್ಎಸ್ಎಫ್) 10,000 ಕೋಟಿ ರೂ.ಗಳ ಸಾಲವನ್ನು ಕೋರಿದೆ. ಪಂಜಾಬ್, ಹಿಮಾಚಲ ಪ್ರದೇಶ ಸೇರಿ ಕೆಲ ಸರ್ಕಾರಗಳು ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಹ ಹೆಣಗಾಡುತ್ತಿವೆ ಎಂದು ವರದಿಯಾಗಿದೆ.
ಬಡತನವೇನೂ ಕಡಿಮೆ ಆಗ್ತಿದೆ, ಆದರೆ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ: 3.6 ಮಿಲಿಯನ್ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಗುರಿಯೊಂದಿಗೆ 2003 ರಲ್ಲಿ ಪ್ರಾರಂಭವಾದ ಬ್ರೆಜಿಲ್ನ ಬೋಲ್ಸಾ ಫ್ಯಾಮಿಲಿಯಾ ಯೋಜನೆಯೊಂದಿಗೆ ಈ ಉಚಿತ ಕೊಡುಗೆಗಳನ್ನು ವರದಿಯಲ್ಲಿ ಹೋಲಿಕೆ ಮಾಡಲಾಗಿದೆ. 2020 ರ ವೇಳೆಗೆ ಬ್ರೆಜಿಲ್ನಲ್ಲಿ ಈ ಯೋಜನೆಯು 14.1 ಮಿಲಿಯನ್ ಕುಟುಂಬಗಳಿಗೆ ವಿಸ್ತರಿಸಿತು. ಬಡತನವು ಗಮನಾರ್ಹವಾಗಿ ಕಡಿಮೆಯಾದರೂ ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತು. (ANI)
ಇದನ್ನೂ ಓದಿ: ಎಲ್ಐಸಿ ಬಳಿಯ ₹880 ಕೋಟಿಗೆ ವಾರಸುದಾರರೇ ಇಲ್ಲ : ನಿಮ್ಮ ಕುಟುಂಬಸ್ಥರ ಹಣವೂ ಇದೆಯಾ ಚೆಕ್ ಮಾಡಿ - LIC UNCLAIMED AMOUNT