ಬೆಳಗಾವಿ: ಮದ್ಯದ ನಶೆಯಲ್ಲಿ ಕಲ್ಲಿನಿಂದ ಜಜ್ಜಿ ಪತಿಯೇ ತನ್ನ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೀರಾಬಾಯಿ (25) ಎಂಬವರೇ ಕೊಲೆಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು ಕಟಾವು ಮಾಡುವ ತಂಡದ ಜೊತೆ ಉಪ್ಪಾರಟ್ಟಿಗೆ ಕೆಲಸಕ್ಕೆ ಬಂದಿದ್ದರು. ಈ ವೇಳೆ, ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಅಲ್ಲದೇ, ಕೊಲೆಯ ಬಳಿಕ ಆರೋಪಿಯು ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದ ಎನ್ನಲಾಗುತ್ತಿದೆ. ತಾಯಿಯ ಮೃತದೇಹದ ಮೇಲೆ ಎರಡು ವರ್ಷದ ಮಗು ಮಲಗಿ ಎಬ್ಬಿಸಲು ಪ್ರಯತ್ನಿಸುತ್ತಿರುವುದು ನೋಡುಗರ ಮನ ಕಲಕುವಂತಿತ್ತು. ಸ್ಥಳೀಯರು ಪಾಪಿ ಪತಿಗೆ ಹಿಡಿಶಾಪ ಹಾಕಿದ್ದಾರೆ. ಸದ್ಯ ಆರೋಪಿ ಬಾಲಾಜಿಯನ್ನು ವಶಕ್ಕೆ ಪಡೆದಿರುವ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಪ್ರೀತಿಸಿದ್ದಕ್ಕೆ ಯುವಕನ ಕೊಲೆ; ಯುವತಿಯ ತಂದೆ, ಅಣ್ಣನ ಬಂಧನ