ಮೈಸೂರು : ನಗರದ ಕಸ ಸಂಗ್ರಹಣ ಘಟಕ ಸೂಯಜ್ ಫಾರಂನಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ತ್ಯಾಜ್ಯ ಸುಟ್ಟು ಕರಕಲಾಗಿದೆ.
ಬೆಂಕಿಯ ಹೊಗೆ ನಗರದಲ್ಲೆಲ್ಲಾ ತುಂಬಿಕೊಂಡಿದ್ದು, ಸ್ಥಳಕ್ಕೆ ಸುಮಾರು 40ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ, ಕಸದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಗರದ ವಿದ್ಯಾರಣ್ಯಪುರಂನಲ್ಲಿರುವ ಸೂಯಜ್ ಫಾರಂನಲ್ಲಿ ಐದರಿಂದ ಆರು ದೊಡ್ಡ ಮಟ್ಟದ ಕಸದ ರಾಶಿಗಳಿವೆ. ಇಲ್ಲಿ ಭಾನುವಾರ ಮಧ್ಯಾಹ್ನ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದ್ದು, ತ್ಯಾಜ್ಯ ಸೇರಿದಂತೆ ಕಸದ ಗುಡ್ಡೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ದಟ್ಟವಾಗಿ ಹೊಗೆಯಾಡುತ್ತಿತ್ತು.
ಸುತ್ತುವರಿದ ದಟ್ಟ ಹೊಗೆ : ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹೊತ್ತಿದ್ದರಿಂದ ನಗರದೆಲ್ಲೆಡೆ ವಿಷಕಾರಕವಾದ ದಟ್ಟ ಹೊಗೆ ಆವರಿಸಿ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಬೆಂಕಿ ನಂದಿಸಿದ್ದರೂ ಕಸದ ರಾಶಿಯಿಂದ ಹೊಗೆ ಬಂದ ಹಿನ್ನೆಲೆ ಮತ್ತೆ ಬೆಂಕಿ ಉಂಟಾಗುವ ಆತಂಕ ಅಲ್ಲಿನ ಸಿಬ್ಬಂದಿಗಳಲ್ಲಿ ಮನೆ ಮಾಡಿತ್ತು.
ಬೆಂಕಿ ಹತೋಟಿಗೆ ತರಲು ಸಿಬ್ಬಂದಿ ಹರಸಾಹಸ : ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಸತತ ಪ್ರಯತ್ನಪಟ್ಟು ಬೆಂಕಿಯನ್ನು ಹತೋಟಿಗೆ ತರಲು ಯಶಸ್ವಿಯಾದರು. ಆದರೆ, ಸಂಜೆಯಾದರೂ ಕೆಲವೆಡೆ ಬೆಂಕಿಯ ಕಿಡಿ ಕಂಡುಬರುತ್ತಿತ್ತು. ಅಲ್ಲದೆ, ನಿರಂತರವಾಗಿ ಹೊಗೆಯಾಡುತ್ತಲೇ ಇತ್ತು. ಇದರಿಂದ ರಾತ್ರಿ ವೇಳೆ ಮತ್ತೆ ಬೆಂಕಿ ಕಾಣಿಸಿಕೊಳ್ಳಬಹುದೆಂಬ ಅನುಮಾನ ಸಿಬ್ಬಂದಿಯಲ್ಲಿ ಕಾಡುತ್ತಿತ್ತು. ಕೊನೆಗೆ ಸತತವಾಗಿ ನೀರು ಹಾಯಿಸಿ ಬೆಂಕಿ ನಿಯಂತ್ರಣಕ್ಕೆ ತಂದರು.
ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ : ಈ ಬಗ್ಗೆ ಈಟಿವಿ ಭಾರತಕ್ಕೆ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಅವರು ಪ್ರತಿಕ್ರಿಯಿಸಿ, ಸ್ಥಳಕ್ಕೆ ಪಾಲಿಕೆಯ ಹಿರಿಯ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಯಜ್ ಫಾರಂನ ಕಸದ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಇವಿ ಬೈಕ್ ಶೋ ರೂಮ್ನಲ್ಲಿ ಬೆಂಕಿ: 30ಕ್ಕೂ ಹೆಚ್ಚು ಬೈಕ್ಗಳು ಆಹುತಿ - FIRE AT ELECTRICAL BIKE SHOWROOM