ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಜನರಿಗೆ ಬೇಕಿರುವ ಪಾರ್ಕಿಂಗ್ ನೀಡಬೇಕೆಂದು ಬೆಂಗಳೂರಿನ ಬಿಜೆಪಿ ಶಾಸಕರ ನಿಯೋಗ ಆಗ್ರಹಿಸಿದೆ. ಬಿಜೆಪಿ ನಿಯೋಗವು ಇಂದು ಮೆಟ್ರೋ ಎಂ.ಡಿ. ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.
ಈ ವೇಳೆ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಮೆಟ್ರೋ ಪ್ರಯಾಣದರ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
![BJP Delegation Requests](https://etvbharatimages.akamaized.net/etvbharat/prod-images/10-02-2025/kn-bng-02-bjp-mlas-talk-script-7208083_10022025163422_1002f_1739185462_981.jpg)
ಇಲ್ಲಿ ದೇಶದಲ್ಲೇ ಮೆಟ್ರೋ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ ಇದು; ನಗರದ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆಟ್ರೋ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ ಎಂದು ರವಿ ಸುಬ್ರಹ್ಮಣ್ಯ ತಿಳಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದೆ. ಈಗ ಮೆಟ್ರೋ ದರ 46% ಏರಿಕೆ ಮಾಡಿ ಪ್ರಹಾರ ಮಾಡಲಾಗಿದೆ ಎಂದ ಅವರು, ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ ಎಂದು ಒತ್ತಾಯಿಸಿದರು.
ಮೆಟ್ರೋ ಸಾರ್ವಜನಿಕರಿಗಾಗಿ ಇದೆ. ಲಾಭವನ್ನೇ ನೋಡುವುದು ಸರಿಯಲ್ಲ, ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಬೇಕು ಎಂಬ ದೃಷ್ಟಿಯಿಂದ ಇದು ಜಾರಿಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಪ್ರಯಾಣ ದರ ಹೆಚ್ಚಳ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದರ ಹೆಚ್ಚಳ ಕೂಡಲೇ ಸ್ಥಗಿತಗೊಳಿಸಬೇಕು. ಜನರಿಗೆ ಬೇಕಿರುವ ಪಾರ್ಕಿಂಗ್ ನೀಡಬೇಕು. ಒಂದಷ್ಟು ಬೇಡಿಕೆ ಮುಂದಿಟ್ಟಿದ್ದೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬೆಂಗಳೂರಿನ ಶಾಸಕರ ಜೊತೆ ಚರ್ಚಿಸಬೇಕಿತ್ತು : ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಇಂದು ಬಿಜೆಪಿ ನಿಯೋಗ ಮೆಟ್ರೋ ಎಂಡಿ ಭೇಟಿ ಮಾಡಿ ಬೆಂಗಳೂರಿನ ಜನರ ಸಮಸ್ಯೆ ಬಗ್ಗೆ ಹೇಳಿದ್ದೇವೆ. ದೇಶದ ಎಲ್ಲಾ ರಾಜ್ಯಗಳ ಮೆಟ್ರೋ ದರ ಕಡಿಮೆ ಇದೆ. ಆದರೆ, ಬೆಂಗಳೂರು ನಗರದಲ್ಲಿ ದರ ಹೆಚ್ಚಾಗಿದೆ. ಇವರು ಯಾವುದೋ ಸಮಿತಿ ಮಾಡಿದ್ದು, ಅದರ ವರದಿಯನ್ನ ಒಪ್ಪಿ ಜಾರಿ ಮಾಡಿದ್ದು ಸರಿಯಲ್ಲ. ಬೆಂಗಳೂರಿನ ಶಾಸಕರ ಜೊತೆ ಚರ್ಚೆ ಮಾಡಬೇಕಿತ್ತು. ಪ್ರಯಾಣಿಕರಿಗೆ ದರ ಹೆಚ್ಚಾಗಿದೆ ಎಂದು ಟೀಕಿಸಿದರು.
ದರ ಹೆಚ್ಚು ಮಾಡಿದ್ದೀರಿ ಹೊರತು ಮೂಲಭೂತ ಸೌಕರ್ಯ ನೀಡಿಲ್ಲ. ಶೌಚಾಲಯ, ಪಾರ್ಕಿಂಗ್ ಏನೂ ಮಾಡಿಲ್ಲ ಎಂದರಲ್ಲದೆ, ದರ ಕಡಿಮೆ ಮಾಡದಿದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ. 5% ದರ ಹೆಚ್ಚಳ ಮಾಡಿದರೆ ತಮ್ಮ ವಿರೋಧವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಜಿಲ್ಲಾಧ್ಯಕ್ಷ ಹರೀಶ್, ಮಾಜಿ ಮಹಾಪೌರರಾದ ಗೌತಮ್, ಪ್ರಕಾಶ್ ಹಾಗೂ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಇಂದಿನಿಂದ ನಮ್ಮ ಮೆಟ್ರೋ ದರ ಏರಿಕೆ: ಎಷ್ಟು ಕಿಲೋಮೀಟರ್‌ಗೆ ಎಷ್ಟು ಟಿಕೆಟ್? - METRO FARE HIKE